ಪುತ್ತೂರು: ವಾಟ್ಸ್‌ಆಪ್ ಗ್ರೂಪ್ ಸದಸ್ಯರ ವಿರುದ್ಧ ದಾಖಲಾಗಿದ್ದ ಪ್ರಕರಣ ಹೈಕೋರ್ಟ್‌ನಲ್ಲಿ ವಜಾ
ಪುತ್ತೂರು, ಆ.28: ಪತ್ರಿಕೆಯ ವಿರುದ್ಧ ಅವಾಚ್ಯ, ನಿಂದನಾತ್ಮಕ ಸಂದೇಶಗಳನ್ನು ಮತ್ತು ಬೆದರಿಕೆ ಸಂದೇಶಗಳನ್ನು ರವಾನಿಸಿದ ಆರೋಪ ಹೊರಿಸಿ ಪುತ್ತೂರಿನ ಸ್ಥಳೀಯ ಪತ್ರಿಕೆಯೊಂದರ ವ್ಯವಸ್ಥಾಪಕರು ಪುತ್ತೂರಿನ ಯುವಭಾರತ್ ವಾಟ್ಸ್‌ಆಪ್ ಗ್ರೂಪ್‌ನ 9 ಮಂದಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.
ಪುತ್ತೂರಿನ ಸ್ಥಳೀಯ ಪತ್ರಿಕೆಯೊಂದರ ವ್ಯವಸ್ಥಾಪಕ ಜ್ಯೋತಿ ಪ್ರಕಾಶ್ ಎಂಬವರು ಮೇ 15ರಂದು ಪುತ್ತೂರಿನ ಯುವಭಾರತ್ ವಾಟ್ಸಆಪ್ ಗ್ರೂಪ್ ಸದಸ್ಯರು ಪತ್ರಿಕೆಯ ವಿರುದ್ಧ ಅವಾಚ್ಯ ಮತ್ತು ಜೀವ ಬೆದರಿಕೆ ಸಂದೇಶಗಳನ್ನು ತಮ್ಮ ವಾಟ್ಸ್‌ಆಪ್ ಗ್ರೂಪಿನಲ್ಲಿ ರವಾನಿಸಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಯುವ ಭಾರತ್ ವಾಟ್ಸ್‌ಆಪ್ ಗ್ರೂಪ್‌ನ ಪ್ರದೀಪ್ ಶೆಟ್ಟಿ, ಚೆನ್ಮಯ ಕೃಷ್ಣ, ಲತೇಶ್ ಶೆಟ್ಟಿ, ದಿನೇಶ್ ಜೈನ್,ಮನ್ಮಥ ಶೆಟ್ಟಿ, ತೀರ್ಥಾರಾಮ, ಪ್ರಮೋದ್, ಜಗತ್ ಭಟ್, ವಿತೇತ್ ಶೆಟ್ಟಿ ಚಾರ್ವಾಕ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು.
ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಯುವಭಾರತ್ ವಾಟ್ಸ್‌ಆಪ್ ಗ್ರೂಪ್‌ನ ಸದಸ್ಯರು ಹೈಕೋರ್ಟ್‌ನ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಾಧೀಶ ಆನಂದ್ ಭೈರಾರೆಡ್ಡಿ ಅವರು ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಕರಣದ ಪ್ರಥಮ ವರ್ತಮಾನ ವರದಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಈ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿನ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಂದ ಜಯ ಎಂದು ಯುವಭಾರತ್ ವಾಟ್ಸ್‌ಆಪ್ ಗ್ರೂಪ್‌ನ ಅಡ್ಮಿನ್ ಪ್ರದೀಪ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ, ಪತ್ರಿಕಾಗೋಷ್ಠಿ ನಡೆಸಿ ಹಾಗೂ ‘ನಾನು ನಿಮ್ಮ ನೇತ್ರಾವತಿ’ ಕಿರು ಚಿತ್ರಣವನ್ನು ಬಿಡುಗಡೆಗೊಳಿಸಿ ಯುವಭಾರತ್ ಸದಸ್ಯರು ಪ್ರೆಸ್‌ಕ್ಲಬ್‌ನಿಂದ ಹೊರಬರುವಾಗ ಪ್ರೆಸ್‌ಕ್ಲಬ್ ಆವರಣದಲ್ಲಿ ಸ್ಥಳೀಯ ಪತ್ರಿಕೆಯೊಂದರ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ,ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಯುವಭಾರತ್‌ನ ಚಿನ್ಮಯ ಕೃಷ್ಣ ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಪ್ರತಿಯಾಗಿ ಆ ಪತ್ರಿಕೆಯ ವ್ಯವಸ್ಥಾಪಕ ಜ್ಯೋತಿ ಪ್ರಕಾಶ್ ಪುಣಚ ಯುವಭಾರತ್ ಗ್ರೂಪ್‌ನ 9 ಮಂದಿಯ ವಿರುದ್ಧ ದೂರು ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.