ಸುಳ್ಯ: ಗಣೇಶೋತ್ಸವದ ವೇಳೆ ಶಿಸ್ತು ಮತ್ತು ಶಾಂತಿ ಕಾಪಾಡಲು ಎಸ್ಪಿ ಭೂಷಣ್ ಸೂಚನೆ
ಸುಳ್ಯ, ಆ.28: ಸಾರ್ವಜನಿಕ ಗಣೇಶೋತ್ಸವದ ಹಿನ್ನೆಲೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆಯು ಸುಳ್ಯ ಪೊಲೀಸ್ ಠಾಣೆಯ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಶಾಂತಿಸಭೆಯ ನೇತೃತ್ವ ವಹಿಸಿ ಮಾತನಾಡಿ, ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಮನವಿ ಮಾಡಿದರು. ಗಣೇಶೋತ್ಸವದ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನು ಅವರು ನೀಡಿದರು.
ಗಣೇಶೋತ್ಸವದ ಸಂದರ್ಭ ವಿದ್ಯುತ್ ಸಂಪರ್ಕದ ವೇಳೆ ಕೇಬಲ್ ಕನೆಕ್ಷನ್ ಸರಿಯಾಗಿರುವಂತೆ, ಶಾಕ್ ಆಗದಂತೆ ನಿಗಾ ವಹಿಸಬೇಕು. ಬೆಂಕಿ ಅವಘಡದ ಮುನ್ನೆಚ್ಚರಿಕೆಯಾಗಿ ನೀರು ಹಾಗೂ ಮರಳನ್ನು ಸ್ಥಳದಲ್ಲಿ ಇರಿಸಿಕೊಳ್ಳಬೇಕು. ಜನದಟ್ಟಣೆ ಅಧಿಕವಾಗಿರುವಲ್ಲಿ ಸಿಸಿ ಟಿವಿ ಅಳವಡಿಸಿ ಸಮಾಜ ದ್ರೋಹಿ ಚಟುವಟಿಕೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗಣೇಶ ವಿಗ್ರಹದ ಮೇಲೆ ಚಿನ್ನಾಭರಣ ಹಾಕಿದ್ದರೆ ಅದನ್ನು ರಾತ್ರಿ ವೇಳೆ ತೆಗೆದಿರಿಸಬೇಕು. ಉತ್ಸವ ಅಥವಾ ಶೋಭಾಯಾತ್ರೆಯ ಸಂದರ್ಭ ಅಧಿಕ ಜನ ಸೇರುವಲ್ಲಿ ಧ್ವನಿವರ್ಧಕ ಅಳವಡಿಸಬೇಕು ಎಂದು ಎಸ್ಪಿ ಹೇಳಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರಿರಬೇಕು. ಅವರ ಪಟ್ಟಿಯನ್ನು ನಮಗೆ ನೀಡಿದಲ್ಲಿ ಇಲಾಖೆಯಿಂದಲೇ ಗುರುತು ಪತ್ರ ನೀಡಲಾಗುವುದು. ಶೋಭಾಯಾತ್ರೆಯ ವೇಳೆ ಟ್ರಾಪಿಕ್ ಜಾಂ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಹಬ್ಬದ ಸಂದರ್ಭ ಮದ್ಯದಂಗಡಿಗಳನ್ನು ಬಂದ್ ಮಾಡುವ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿಕೊಳ್ಳುತ್ತೇವೆ. ಗಣೇಶ ವಿಸರ್ಜನೆಯ ವೇಳೆಯೂ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡದಂತೆ ಮೆಸ್ಕಾಂಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಹಬ್ಬದ ಸಂಭ್ರಮ ಇನ್ನೊಬ್ಬರ ತೊಂದರೆಗೆ ಕಾರಣವಾಗಬಾರದು. ಈ ನಿಟ್ಟಿನಲ್ಲಿ ಡಿಜೆ ಸೌಂಡ್‌ಗಳ ಬಗ್ಗೆ ಜಾಗರೂಕತೆ ವಹಿಸಬೇಕು. ಶಾಲೆ, ಆಸ್ಪತ್ರೆ, ಧಾರ್ಮಿಕ ಕೇಂದ್ರದ ಬಳಿ ಮೆರವಣಿಗೆ ಸಾಗುವಾಗ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು. ತಾಲೂಕಿನ ವಿವಿಧ ಗಣೇಶೋತ್ಸವ ಸಂಘಟಕರಿಂದ ಪ್ರತಿಷ್ಠೆ ಹಾಗೂ ವಿಸರ್ಜನೆ ಹಾಗೂ ಮೆರವಣಿಗೆಯ ಮಾಹಿತಿಯನ್ನು ಪಡೆದ ಎಸ್ಪಿ ಅವರು ಅವರಿಂದ ಸಲಹೆ ಸೂಚನೆಯನ್ನು ಪಡೆದುಕೊಂಡರು.
ಜಾಲ್ಸೂರಿನಲ್ಲಿ ಒಂದು ದಿನವಾದರೂ ಬಾರ್‌ನ್ನು ಮುಚ್ಚಿಸುವಂತೆ ಕೆ.ಎಂ. ಬಾಬು ಕೇಳಿಕೊಂಡರು. ಮೆರವಣಿಗೆಯ ಸಂದರ್ಭ ವೃಥಾ ಕಾರಣಕ್ಕೆ ಡಿಜೆಗಳಿಗೆ ತಡೆಯೊಡ್ಡಬಾರದೆಂದು ಎಂ. ವೆಂಕಪ್ಪ ಗೌಡರು ಹೇಳಿದರು. ಕೆಲವೇ ಸಮಯದಲ್ಲಿ ಸುಳ್ಯ ದಸರಾ ನಡೆಯಲಿದ್ದು ಇದರ ಶೋಭಾಯಾತ್ರೆಯ ವೇಳೆ ರಸ್ತೆಯ ಒಂದು ಬದಿಯನ್ನು ಕ್ಲಿಯರ್ ಮಾಡಿ ಕೊಡದೇ ಇರುವುದರಿಂದ ಸಮಸ್ಯೆಯಾಗುತ್ತದೆ. ಈ ಹಿಂದೆ ಹಲವು ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಇಲಾಖೆ ಕ್ರಮ ಕೈಗೊಂಡಿಲ್ಲ. ಈ ಬಾರಿಯಾದರೂ ಎಸ್ಪಿ ಗಮನ ಹರಿಸಬೇಕೆಂದು ಕೆ. ಗೋಕುಲ್‌ದಾಸ್ ಹೇಳಿದರು.
ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ವಿ.ಕೃಷ್ಣಯ್ಯ ಸ್ವಾಗತಿಸಿ ವಂದಿಸಿದರು. ಎಸ್ಸೈ ಎಚ್.ವಿ ಚಂದ್ರಶೇಖರ ಉಪಸ್ಥಿತರಿದ್ದರು.