ಬದಲಾವಣೆಯತ್ತ ದಾಪುಗಾಲು ‘ಡಿಜಿಟಲ್ ಕ್ಯಾಂಪ್ಕೊ’ ಯೋಜನೆ: ಎಸ್.ಆರ್ ಸತೀಶ್ಚಂದ್ರ
ಪುತ್ತೂರು, ಆ.28: ಬದಲಾವಣೆಯನ್ನು ಇಡೀ ಜಗತ್ತು ಒಪ್ಪಿಕೊಂಡಿದ್ದು, ಮೊಬೈಲ್, ಸಾರಿಗೆ, ಮನೆಗಳ ನಿಮಾಣ, ಪೈಂಟಿಂಗ್, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ಕಂಡುಬರುತ್ತಿದೆ. ಕ್ಯಾಂಪ್ಕೊ ಸಂಸ್ಥೆಯು ಕೂಡ ಇದೇ ರೀತಿಯ ಬದಲಾವಣೆಯತ್ತ ದಾಪುಗಾಲು ಇಟ್ಟಿದ್ದು ’ಡಿಜಿಟಲ್ ಕ್ಯಾಂಪ್ಕೊ’ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅವರು ಹೇಳಿದರು.
ಪುತ್ತೂರಿನ ಎಂ.ಟಿ ರಸ್ತೆಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯ ಶಾಖಾ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಣಮಟ್ಟದ ಸಂಸ್ಥೆಯಾಗಿ ಮತ್ತು ಜನರ ನಂಬಿಕೆಯ ಸಂಸ್ಥೆಯಾಗಿ ಕ್ಯಾಂಪ್ಕೊ ಬೆಳೆದಿದೆ. ರೈತರು ಬೆಳೆದ ಎಲ್ಲಾ ಉತ್ಪನ್ನಗಳನ್ನು ಖರೀದಿಸಬೇಕು ಎಂಬ ಬೇಡಿಕೆಯು ಬರುತ್ತಿದ್ದು ರೈತರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತಿದೆ. ಮಾರುಕಟ್ಟೆಯಲ್ಲಿ ಧಾರಣೆ ಕುಸಿದಾಗಲೂ ಕ್ಯಾಂಪ್ಕೊ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಶೇ.10 ವ್ಯವಹಾರ ಮಾಡಿ ಶೇ.100ರಷ್ಟು ತೆರಿಗೆಯನ್ನು ಸರಕಾರಕ್ಕೆ ಸಂಸ್ಥೆಯು ಪಾವತಿಸುತ್ತಿದೆ. ಅಡಿಕೆ ಕೃಷಿಕರ ಹಿತ ಕಾಯುವ ಕೇಂದ್ರ ಸರಕಾರದ ಭರವಸೆಯು ಈಡೇರುವ ಹಂತದಲ್ಲಿದ್ದು, ಶೀಘ್ರವೇ ಬೆಂಬಲ ಬೆಲೆಯನ್ನು ಘೋಷಿಸಲಿದೆ. ಬೆಳೆಗಾರರ ಹಿತರಕ್ಷಣೆ ಮತ್ತು ಮಾರುಕಟ್ಟೆಯ ಸ್ಥಿರತೆಗಾಗಿ ಸರ್ವರೀತಿಯ ಪ್ರಯತ್ನವನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ರೈತರು ತಾವು ಬೆಳೆದ ಉತ್ಪನ್ನಗಳನ್ನು ಅಧಿಕೃತ ಬಿಲ್‌ನಲ್ಲಿಯೇ ವ್ಯವಹಾರ ಮಾಡುತ್ತೇವೆ. ಆ ಮೂಲಕ ಸರಕಾರಕ್ಕೆ ತೆರಿಗೆ ಸಂದಾಯ ಮಾಡುತ್ತೇವೆ ಎಂದು ಪ್ರಮಾಣ ಮಾಡಬೇಕು ಎಂದು ಅವರು ಹೇಳಿದರು.
ಕ್ಯಾಂಪ್ಕೊ ಮಾಜಿ ನಿರ್ದೇಶಕ ಸಂಜೀವ ಮಠಂದೂರು, ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ , ವಿಟ್ಲ ಸಿಪಿಸಿಆರ್‌ಐನ ತಾಂತ್ರಿಕ ಅಧಿಕಾರಿ ಪುರಂದರ ಮಾತನಾಡಿದರು.
ಹಿರಿಯ ಕೃಷಿಕ ರಮೇಶ್ ಶೆಟ್ಟಿ ವಾಮದಪದವು, ಶ್ರೀನಿವಾಸ ರಾವ್ ಮುಗೇರು, ಸೀತಾರಾಮ ರೈ ಕುರಿಯ, ಲಕ್ಷ್ಮೀ ವಿ.ಎಲ್ ದೀಪ ಬೆಳಗಿಸಿ ಉದ್ಘಾಟಿಸಿದರು.
ನಿರ್ದೇಶಕ ಪದ್ಮನಾಭ ಕೊಂಕೋಡಿ, ರೀಜನಲ್ ಮ್ಯಾನೇಜರ್ ಪ್ರೇಮಾನಂದ ಶೆಟ್ಟಿಗಾರ್ ಮತ್ತಿತರರು ಇದ್ದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಸ್ವಾಗತಿಸಿದರು. ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ವಂದಿಸಿದರು. ಈಶ್ವರ ನಾಯ್ಕಿ ಕಾರ್ಯಕ್ರಮ ನಿರೂಪಿಸಿದರು.
ಮುಂದೆ ಕಾಳುಮೆಣಸು ವ್ಯವಹಾರ
ಸುಮಾರು 400 ವರ್ಷಗಳ ಹಿಂದೆಯೇ ರಾಣಿ ಅಬ್ಬಕ್ಕ ಕಾಳುಮೆಣಸನ್ನು ವಿದೇಶಗಳಿಗೆ ರಪ್ತು ಮಾಡುತ್ತಿದ್ದರು. ಆದರೆ ಕ್ಯಾಂಪ್ಕೊ ಸಂಸ್ಥೆಯ ಮೂಲಕ ಕಳೆದ 40 ವರ್ಷಗಳಿಂದ ರೈತರು ಬೆಳೆದ ಅಡಿಕೆ ಹಾಗೂ ಕೊಕ್ಕೋಗಳನ್ನು ಮಾತ್ರವೇ ವ್ಯವಹಾರ ಮಾಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಕಾಳು ಮೆಣಸು ವ್ಯವಹಾರ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.