ಕರುಕುಟ್ಟಿ ಬಳಿ ಹಳಿ ತಪ್ಪಿದ ಮಲಬಾರ್ ಎಕ್ಸ್‌ಪ್ರೆಸ್ ರೈಲು

Update: 2016-08-28 14:29 GMT

ಕೊಚ್ಚಿ,ಆ.28: ಇಲ್ಲಿಂದ 45 ಕಿ.ಮೀ.ದೂರದ ಕರುಕುಟ್ಟಿ ಎಂಬಲ್ಲಿ ರವಿವಾರ ನಸುಕಿನಲ್ಲಿ ಭಾರೀ ಮಳೆಯ ನಡುವೆ ತಿರುವನಂತಪುರ-ಮಂಗಳೂರು ಮಲಬಾರ್ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ್ದು, ಪ್ರಯಾಣಿಕರು ಗಾಯಗೊಳ್ಳದೆ ಪಾರಾಗಿದ್ದಾರೆ. ಅಪಘಾತದಿಂದಾಗಿ ಕೇರಳದಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿದೆ.

ಈ ಅವಘಡದ ಬೆನ್ನಿಗೇ ಎರ್ನಾಕುಲಮ್‌ನತ್ತ ಚಲಿಸುತ್ತಿದ್ದ ಚೆನ್ನೈ-ತಿರುವನಂತಪುರ ರೈಲನ್ನು ಅವಘಡ ಸ್ಥಳದಿಂದ ಸುಮಾರು 300 ಮೀ.ದೂರದಲ್ಲಿಯೇ ನಿಲ್ಲಿಸಲು ಸಾಧ್ಯವಾಗಿದ್ದು, ಸಂಭಾವ್ಯ ಭಾರೀ ಅಪಘಾತವೊಂದು ತಪ್ಪಿಹೋಗಿದೆ.

ಮಲಬಾರ್ ಎಕ್ಸ್‌ಪ್ರೆಸ್ ಆಲುವಾ ರೈಲು ನಿಲ್ದಾಣವನ್ನು ಬಿಟ್ಟ ಕೆಲವೇ ಕ್ಷಣಗಳಲ್ಲಿ ನಸುಕಿನ 2.55ಕ್ಕೆ ಈ ಅವಘಡ ಸಂಭವಿಸಿದ್ದು, ನಿಧಾನವಾಗಿ ಚಲಿಸುತ್ತಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಎಲ್ಲ ಪ್ರಯಾಣಿಕರನ್ನು ಅವರ ಮುಂದಿನ ಪ್ರಯಾಣಕ್ಕಾಗಿ ತ್ರಿಶೂರಿಗೆ ಕರೆದೊಯ್ಯಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಹಳಿ ತಪ್ಪಿದ ಬೋಗಿಗಳು ರೈಲಿನಿಂದ ಪ್ರತ್ಯೇಕಗೊಂಡಿರಲಿಲ್ಲ ಅಥವಾ ಮಗುಚಿ ಬಿದ್ದಿರಲಿಲ್ಲ ಮತ್ತು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಲು ಇದೂ ಒಂದು ಕಾರಣವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಈ ಅಪಘಾತದಿಂದಾಗಿ ಎರ್ನಾಕುಲಂ-ತ್ರಿಶೂರು ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಭಾರೀ ವ್ಯತ್ಯಯವುಂಟಾಗಿದ್ದು, 21 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಹಲವಾರು ರೈಲುಗಳನ್ನು ತಿರುವನಂತಪುರದಲ್ಲಿಯೇ ತಡೆಹಿಡಿಯಲಾಗಿದ್ದು, ಕೆಲವು ದೂರಸಂಚಾರದ ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಕನ್ಯಾಕುಮಾರಿ-ಮುಂಬೈ ಸಿಎಸ್‌ಟಿ ಎಕ್ಸಪ್ರೆಸ್,ತಿರುವನಂತಪುರ-ಗೋರಖಪುರ ರಾಪ್ತಿಸಾಗರ್ ಎಕ್ಸ್‌ಪ್ರೆಸ್, ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ತಿರುವನಂತಪುರ-ಹೊಸದಿಲ್ಲಿ ಕೇರಳ ಎಕ್ಸ್‌ಪ್ರೆಸ್ ಸೇರಿದಂತೆ ಆರು ದೂರ ಸಂಚಾರ ರೈಲುಗಳನ್ನು ತಿರುನೆಲ್ವೆಲಿ ಮೂಲಕ ಸಂಚರಿಸುವಂತೆ ಮಾಡಲಾಗಿದೆ. ಎರ್ನಾಕುಲಂವರೆಗೆ ರೈಲುಗಳ ಸಂಚಾರ ರಾತ್ರಿಯಿಂದ ಪುನರಾರಂಭಗೊಂಡಿದ್ದು, ತ್ರಿಶೂರು ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆಯಿಂದ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಹಿರಿಯ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ರೈಲ್ವೆಯ ಹೆಚ್ಚುವರಿ ಮಹಾ ಪ್ರಬಂಧಕ ಪಿ.ಕೆ.ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು. ಹಳಿಗಳಲ್ಲಿ ಅಥವಾ ಬೋಗಿಗಳಲ್ಲಿ ದೋಷದಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News