×
Ad

ಎತ್ತಿನಹೊಳೆ ಕುರಿತಾದ ಜಿಲ್ಲೆಯ ಜನರ ಗೊಂದಲವನ್ನು ಸರಕಾರ ಇನ್ನಾದರೂ ನಿವಾರಿಸಬೇಕು: ಡಾ.ವೀರೇಂದ್ರ ಹೆಗ್ಗಡೆ

Update: 2016-08-28 20:22 IST

ಬೆಳ್ತಂಗಡಿ, ಆ.28: ಎತ್ತಿನಹೊಳೆ ಯೋಜನೆಯ ಬಗ್ಗೆ ದ.ಕ. ಜಿಲ್ಲೆಯ ಜನರಲ್ಲಿ ಸಾಕಷ್ಟು ತಾಂತ್ರಿಕ ಗೊಂದಲಗಳಿದ್ದು, ಸರಕಾರ ಇವುಗಳ ಕುರಿತು ತಜ್ಞರಿಂದ ಮಾಹಿತಿ ಕೊಡಿಸಬೇಕಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ, ಮನವಿ ಮಾಡಿದ್ದರೂ ಸರಕಾರ ಸ್ಪಂದಿಸಲಿಲ್ಲ. ಇನ್ನಾದರೂ ಮಾಹಿತಿ ನೀಡಿ ಗೊಂದಲ ನಿವಾರಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಅವರು ರವಿವಾರ ಎತ್ತಿನಹೊಳೆ ಹೋರಾಟ ಸಮಿತಿಯ ನಿಯೋಗ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ನಿಯೋಗದ ಜೊತೆಗೆ ಮಾತುಕತೆ ನಡೆಸಿದರು.

ಕೋಲಾರ, ರಾಮನಗರ ಭಾಗದ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಅವರಿಗೂ ನೀರಿನ ತೀವ್ರ ಅಗತ್ಯವಿದೆ. ಒಂದೇ ರಾಜ್ಯದ ಮಂದಿ ಎಂದಾಗ ಅಣ್ಣ ತಮ್ಮಂದಿರಿದ್ದಂತೆ. ನಮ್ಮೊಳಗೆ ಕಲಹ ಅಲ್ಲ. ಆದರೆ ದ.ಕ.ದಲ್ಲಿ ಸಾಕಷ್ಟು ಮಳೆಯಾಗಿಲ್ಲ. ನದಿಗಳು ತುಂಬಿ ಹರಿದಿಲ್ಲ. ಹಾಗಿರುವಾಗ ನೀರು ಕೊಡುವುದು ಹೇಗೆ ಸಾಧ್ಯ?, ದ.ಕ. ಜನತೆಯ ಗೊಂದಲ ನಿವಾರಿಸಿ ಎಂದು ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ. ನಮಗೂ ನೀರಿಲ್ಲ, ಅವರಿಗೂ ನೀರಿಲ್ಲ ಎಂದಾಗಬಾರದು. ಕಿಂಡಿ ಅಣೆಕಟ್ಟುಗಳ ರಚನೆ, ಮಳೆನೀರು ಸಂಗ್ರಹದ ಮೂಲಕ ಬತ್ತಿರುವ ಅಂತರ್ಜಲದ ಕೊರತೆ ನೀಗಿಸುವ ಕಾರ್ಯ ಕೂಡಾ ನಡೆಯಬೇಕಿದೆ ಎಂದರು.

ಮಾಜಿ ಶಾಸಕ, ಎತ್ತಿನಹೊಳೆ ವಿರೋಧ ಹೋರಾಟ ಸಮಿತಿ ಮುಖ್ಯಸ್ಥ, ವಿಜಯ್ ಕುಮಾರ್ ಶೆಟ್ಟಿ ಅವರು ಸುಪ್ರೀಂಕೋರ್ಟಿನ ಹಸಿರುಪೀಠದಲ್ಲಿ ಅರ್ಜಿ ಇರುವ ಹಂತವನ್ನು ವಿವರಿಸಿ, ಡಾ. ಹೆಗ್ಗಡೆಯವರ ಮಾರ್ಗದರ್ಶನ ಕೋರಿದರು.

ನಿಯೋಗದಲ್ಲಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಮಿತಿಯ ಪದಾಧಿಕಾರಿಗಳಾದ ಶಶಿರಾಜ್ ಶೆಟ್ಟಿ ಕೊಳಂಬೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಆನಂದ ಶೆಟ್ಟಿ ಅಡ್ಯಾರ್, ರಮಾನಂದ ಶೆಟ್ಟಿ, ಹರೀಶ್ ಶೆಟ್ಟಿ ಬೊಕ್ಕಪಟ್ಣ, ಮಂಜು ಪ್ರಸಾದ್, ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ , ಜಯರಾಮ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News