×
Ad

ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ ಅಸೈಗೋಳಿ ಜಂಕ್ಷನ್‌ನ ತ್ಯಾಜ್ಯದ ರಾಶಿ

Update: 2016-08-28 21:45 IST

ಕೊಣಾಜೆ, ಆ.28: ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೈಗೋಳಿ ಜಂಕ್ಷನ್ ಸಮೀಪವೇ ಕೊಳೆದು ನಾರುತ್ತಿರುವ ತ್ಯಾಜ್ಯರಾಶಿಗೆ ಸೂಕ್ತ ವಿಲೇವಾರಿ ವ್ಯವಸ್ಥೆ ಇಲ್ಲದೆ ಇರುವ ಪರಿಣಾಮ ಪರಿಸರದ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಮಳೆಗಾಲವಾಗಿರುವುದರಿಂದ ಈ ತ್ಯಾಜ್ಯ ರಾಶಿಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.

ದೇರಳಕಟ್ಟೆಯಿಂದ ಕೊಣಾಜೆ ಮುಡಿಪು ಭಾಗದಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಇನ್ನಿತರ ಪ್ರತಿಷ್ಥಿತ ಕಂಪೆನಿಗಳು ಇರುವ ಪರಿಣಾಮ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುವ ಪ್ರದೇಶವಾಗಿದೆ. ಆದರೆ ದೌರ್ಭಾಗ್ಯವೆಂದರೆ ದೇರಳಕಟ್ಟೆಯಿಂದ ಹಿಡಿದು ಕೊಣಾಜೆ ಮುಡಿಪು ಭಾಗದ ರಸ್ತೆ ಬದಿಯ ಅಲ್ಲಲ್ಲಿ ತ್ಯಾಜ್ಯದ ರಾಶಿ ಬಿದ್ದಿರುವುದರಿಂದ ಜನರು ಈ ಭಾಗದಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರಮುಖವಾಗಿ ಅಸೈಗೋಳಿ ಜಂಕ್ಷನ್‌ನಲ್ಲೇ ತ್ಯಾಜ್ಯರಾಶಿ ಬಿದ್ದಿರುವುದು ಹಲವಾರು ಸಮಸ್ಯೆಗೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಕೊಣಾಜೆ ಗ್ರಾಮ ಪಂಚಾಯತ್ ಕಳೆದ ಹಲವು ವರ್ಷದ ಹಿಂದೆ ತ್ಯಾಜ್ಯ, ಕಸವನ್ನು ಎಸೆಯಲು ಹೊಂಡ ಮತ್ತು ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸಿತ್ತು. ಆದರೆ ಈ ಹೊಂಡವು ತುಂಬಿ ತುಳುಕುತ್ತಿದ್ದರೂ ಸೂಕ್ತ ವಿಲೇವಾರಿ ವ್ಯವಸ್ಥೆ ಇಲ್ಲದೆ ತ್ಯಾಜ್ಯರಾಶಿ ರಸ್ತೆ ಬದಿಯಲ್ಲೇ ಬಿದ್ದುಕೊಂಡಿದೆ. ಅಲ್ಲದೆ ಕೋಳಿಯ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯವನ್ನು ಎಸೆಯುವವರು ಕೂಡಾ ಸರಿಯಾದ ಜಾಗಕ್ಕೆ ಎಸೆಯದೆ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವುದು ಕೂಡಾ ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಸೈಗೋಳಿ ಜಂಕ್ಷನ್ ಬಳಿ ಇರುವ ತ್ಯಾಜ್ಯದ ವಿಲೇವಾರಿಯನ್ನು ಪಂಚಾಯತ್ ವತಿಯಿಂದ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಇಲ್ಲಿ ಕೇವಲ ಅಸೈಗೋಳಿಯವರು ಮಾತ್ರವಲ್ಲ ಹೊರಗಿನ ಜನರು ರಾತ್ರಿ ವೇಳೆ ತ್ಯಾಜ್ಯವನ್ನು ಎಸೆದುಹೋಗುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಕಸ, ತ್ಯಾಜ್ಯವನ್ನು ವಿಲೇವಾರಿ ಮಾಡಿದ ಮರುದಿನವೇ ಮತ್ತೆ ತ್ಯಾಜ್ಯ ರಾಶಿ ಬಿದ್ದಿರುತ್ತದೆ. ಇದಕ್ಕೆ ಈಗಾಗಲೇ ನಾವು ಪರ್ಯಾಯವಾಗಿ ಯೋಜನೆ ರೂಪಿಸಿದ್ದು ಮುಂದಿನ ದಿನಗಳಲ್ಲಿ ತ್ಯಾಜ್ಯದ ರಾಶಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ’’.

ಶೌಕತ್ ಅಲಿ ಅಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News