ನಿರಪರಾಧಿಯ ಬಿಡುಗಡೆಗೆ ಆಗ್ರಹಿಸಿ ಧರಣಿ
ಮಂಗಳೂರು, ಆ. 28: ವಾಮಂಜೂರಿನಲ್ಲಿ ಆ.19ರಂದು ನಡೆದ ಚರಣ್ ಕೊಲೆ ಪ್ರಕರಣದಲ್ಲಿ ಪೊಲೀಸರು ನಿರಪರಾಧಿ ಸೈಫುಲ್ಲಾ ಎಂಬಾತನನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಹಾಗೂ ಆತನನ್ನು ಬಿಡುಗಡೆಗೊಳಿಸಬೇಕೆಂದು ಪಿಎಫ್ಐ ಕಾರ್ಯಕರ್ತರು ಮತ್ತು ಸ್ಥಳೀಯರು ಎದುರುಪದವು ಮಸೀದಿ ಸಮೀಪ ಧರಣಿ ನಡೆಸಿದರು. ರವಿವಾರ ಸಂಜೆ ಮೂಡುಶೆಡ್ಡೆ ಎದುರುಪದವಿನಲ್ಲಿ ಪೊಲೀಸರು ಬಂಧಿಸಿರುವ ಸೈಫುಲ್ಲ ನಿರಪರಾಧಿಯಾಗಿದ್ದು, ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಇಲ್ಲ. ಆತನನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಅಲ್ಲದೆ, ಈ ಬಗ್ಗೆ ಮನವಿಯನ್ನು ಡಿಸಿಪಿಯವರೇ ಖುದ್ದಾಗಿ ಆಗಮಿಸಿ ಸ್ವೀಕರಿಸಬೇಕು, ಇಲ್ಲದಿದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಡಿಸಿಪಿ ಶಾಂತರಾಜು ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಕಾವೂರು ಠಾಣಾ ಇನ್‌ಸ್ಪೆಕ್ಟರ್ ನಟರಾಜ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್
ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸದಿದ್ದರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಎಸಿಪಿ ಉದಯ ನಾಯಕ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕದ್ರಿ ಠಾಣಾ ಇನ್‌ಸ್ಪೆಕ್ಟರ್ ಮಾರುತಿ ನಾಯಕ್, ಪಾಂಡೇಶ್ವರ ಠಾಣಾ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ, ಬಂದರು ಠಾಣಾ ಇನ್‌ಸ್ಪೆಕ್ಟರ್ ಶಾಂತಾರಾಮ್, ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಶರೀಫ್, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.