ದಲಿತ ಆತ್ಮಕತೆಗಳಲ್ಲಿ ಮಹಿಳೆಯ ಅನಾವರಣ ಸಾಕಷ್ಟಿಲ್ಲ: ಅನಸೂಯಾ ಕಾಂಬ್ಳೆ

Update: 2016-08-28 18:32 GMT

ಮಂಗಳೂರು, ಆ.28: ದಲಿತರ ಆತ್ಮಕತೆಗಳಲ್ಲಿ ತಾಯ್ತನದ ಸೆಳೆತ ಇದೆಯಾದರೂ ದಲಿತ ಹೆಣ್ಣಿನ ಅನಾವರಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಹಾವೇರಿಯ ಕವಿ, ಸಾಹಿತಿ ಅನಸೂಯಾ ಕಾಂಬ್ಳೆ ಅಭಿಪ್ರಾಯಿಸಿದ್ದಾರೆ. ರವಿವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಸಮುದಾಯ, ಡಿವೈಎಫ್‌ಐಗಳ ಸಹಯೋಗದಲ್ಲಿ ‘ಕನ್ನಡ ಆತ್ಮಕತೆಗಳಲ್ಲಿ ದಲಿತ ಸಂವೇದನೆ’ ಎಂಬ ವಿಷಯದಲ್ಲಿ ಹಮ್ಮಿಕೊಂಡ ವಾಚನಾಭಿರುಚಿ ಕಮ್ಮಟದಲ್ಲಿ ‘ದಲಿತ ಆತ್ಮಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ ಕುರಿತು ಅವರು ಮಾತನಾಡುತ್ತಿದ್ದರು. ಚರಿತ್ರೆಯಲ್ಲಿ ಕಳೆದುಹೋದವರು ಆತ್ಮ ಕಥನಗಳ ಮೂಲಕ ಮರು ಚರಿತ್ರೆ ನಿರ್ಮಾಣ ಮಾಡಿದ್ದಾರೆ. ಮರಾಠಿ ಭಾಷೆಯಲ್ಲಿ ದಲಿತ ಮಹಿಳೆಯರ ಆತ್ಮಕತೆಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಡಲಾಗಿದೆ. ದಲಿತ ಮಹಿಳೆ ತನ್ನ ಮೇಲೆ ಅದೆಷ್ಟು ದೌರ್ಜನ್ಯಗಳಾದರೂ ಎದೆಗುಂದಿ ಆತ್ಮಹತ್ಯೆಯಂತಹ ದಾರಿ ತುಳಿಯದೆ ಅದರ ವಿರುದ್ಧ ಸೆಟೆದು ತನ್ನ ಬದುಕನ್ನು ರೂಪಿಸಬಲ್ಲಳು ಎಂಬುದು ಅನೇಕ ಆತ್ಮಕತೆಗಳಲ್ಲಿ ನಿರೂಪಿತವಾಗಿವೆ ಎಂದು ಅವರು ಹೇಳಿದರು. ದಲಿತ ಆತ್ಮಕತೆಗಳಲ್ಲಿ ಸಮಾಜದ ಭಾಗವಾದ ದಲಿತ ಮಹಿಳೆಯನ್ನು ನಿರೀಕ್ಷಿತ ಮಟ್ಟದಲ್ಲಿ ಪ್ರತಿನಿಧೀಕರಿಸಲು ಸಾಧ್ಯವಾಗಿಲ್ಲ. ಹೊಸ ಚರಿತ್ರೆಯ ಶೋಧದೊಂದಿಗೆ ಪೂರ್ಣ ಪ್ರಮಾಣದಲ್ಲಿ ದಲಿತ ಮಹಿಳೆಯ ಅನಾವರಣ ಆತ್ಮಕತೆಗಳ ಮೂಲಕ ಮುಂದಿನ ದಿನಗಳಲ್ಲಾದರೂ ಹೊರಬರುವ ನಿರೀಕ್ಷೆ ಇದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಸಹ ಮಾತುಗಳನ್ನಾಡಿದ ಸಾಹಿತಿ ಬಿ.ಎಂ. ರೋಹಿಣಿ, ದಲಿತ ಮಹಿಳೆಯಲ್ಲಿ ನೋವು, ತುಮುಲಗಳು ಸಾಕಷ್ಟಿವೆ. ಅದು ಹೊರಗೆ ಬರಬೇಕಿದೆ. ಸಿಡಿದು ಪ್ರತಿಭಟಿಸುವ ನಿಟ್ಟಿನಲ್ಲಿ, ಸಮಾಜದ ಎದುರು ತನ್ನ ಸ್ವಾಭಿಮಾನ ಪ್ರದರ್ಶನದ ನಿಟ್ಟಿನಲ್ಲಿ ಆಕೆಯಲ್ಲಿನ ಗೊಂದಲ ನಿವಾರಣೆಯಲ್ಲಿ ಆಕೆಗೆ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದರು. ಇದೇ ವೇಳೆ ಉಪನ್ಯಾಸಕಿ ಜ್ಯೋತಿ ಚೇಳ್ಯಾರು ಮಾತುಗಳನ್ನಾಡಿದರು. ಗೋಷ್ಠಿಯಲ್ಲಿ ವಾಚನಾಭಿರುಚಿ ಕಮ್ಮಟದ ನಿರ್ದೇಶಕ ಡಾ. ವಿಠಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಸಹಾಯಕ ಪ್ರೊ.ಸಬಿತಾ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News