ನಿಮ್ಮ ಊರಿನ ಪೊಲೀಸ್ ಸಿಬ್ಬಂದಿ ಸದಾ ಬುಸುಗುಡುತ್ತಿರುವುದು ಏಕೆ ಗೊತ್ತೇ?

Update: 2016-08-29 03:20 GMT

ಹೊಸದಿಲ್ಲಿ, ಆ.29: ಖಾಕಿ ದರ್ಪಕ್ಕೆ ಕಾರಣ ನಿಮಗೆ ಗೊತ್ತೇ? ನಿಮ್ಮ ಊರಿನ ಪೊಲೀಸ್ ಸಿಬ್ಬಂದಿ ಸದಾ ಬುಸುಗುಡುತ್ತಿರುವುದು ಅಥವಾ ಶ್ರದ್ಧೆಯಿಂದ ಕೆಲಸ ಮಾಡದಿರುವುದಕ್ಕೆ ಕಾರಣ ಏನು ಎಂದು ನಿಮಗೆ ತಿಳಿದಿದೆಯೇ? ಅತಿಯಾದ ದಣಿವು ಇಂಥ ಪ್ರವೃತ್ತಿಗೆ ಕಾರಣ ಎನ್ನುವ ಆಘಾತಕಾರಿ ಅಂಶವನ್ನು ಬ್ಯೂರೊ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಟ್ ಬಹಿರಂಗಪಡಿಸಿದೆ.

ಬಹುತೇಕ ಮಂದಿ ಪೊಲೀಸ್ ಅಧಿಕಾರಿಗಳು ಅದರಲ್ಲೂ ಮುಖ್ಯವಾಗಿ ಇನ್‌ಸ್ಪೆಕ್ಟರ್ ಹುದ್ದೆಗಿಂತ ಕೆಳಗಿನ ಅಧಿಕಾರಿಗಳು, ಯದ್ವಾ ತದ್ವ ಕೆಲಸದ ಅವಧಿ, ತುರ್ತು ಕಾರ್ಯಕ್ಕೆ ನಿಯೋಜನೆ, ನಿದ್ರಾಹೀನತೆ, ಕಳಪೆ ಆಹಾರ ಸೇವನೆ, ವಿಸ್ತರಿತ ಕರ್ತವ್ಯ, ಕುಟುಂಬವನ್ನು ಭೇಟಿ ಮಾಡಲು ಅವಕಾಶ ಆಗದಿರುವುದು ಮತ್ತಿತರ ಕಾರಣಗಳಿಂದ ಬಳಲಿರುತ್ತಾರೆ. ಈ ಬಳಲಿಕೆ ಹತಾಶೆಗೆ ಕಾರಣವಾಗುತ್ತದೆ ಎಂದು ಈ ಕುರಿತ ಅಧ್ಯಯನ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇದರ ಜತೆಗೆ ಮೇಲಧಿಕಾರಿಗಳ ನಡವಳಿಕೆ, ಧೂಮಪಾನ, ಆಲ್ಕೋಹಾಲ್, ಮೂಲಸೌಕರ್ಯಗಳ ಕೊರತೆ ಹಾಗೂ ಕೆಲವೊಮ್ಮೆ ಸ್ನಾನ ಮಾಡಲೂ ಸಮಯ ಸಿಗದಿರುವುದು ಇದಕ್ಕೆ ಕಾರಣ ಎಂದು ವರದಿ ಹೇಳಿದೆ.

ಮಾನಸಿಕ ಹಾಗೂ ದೈಹಿಕ ದಣಿವಿನ ಕಾರಣದಿಂದ ಪೊಲೀಸರು ತಮ್ಮ ತಾಳ್ಮೆ ಕಳೆದುಕೊಂಡು, ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಸರಿ - ತಪ್ಪು ನಿರ್ಣಯಿಸುವ ವ್ಯವಧಾನ ಇರುವುದಿಲ್ಲ. ಈ ಕಾರಣದಿಂದ ವ್ಯಕ್ತಿಗಳ ನಡುವಿನ ಸಂವಹನದಲ್ಲಿ ಆಸಕ್ತಿ ಕಳೆದುಕೊಂಡಿರುತ್ತಾರೆ ಹಾಗೂ ಕೈ ಹಾಗೂ ಕಣ್ಣಿನ ನಡುವಿನ ಸಮನ್ವಯ ಇರುವುದಿಲ್ಲ. ಜತೆಗೆ ಜಾಗೃತ ಮನೋಭಾವವನ್ನು ಕಳೆದುಕೊಂಡು ಸ್ಪಂದನೆ ನಿಧಾನವಾಗಿರುತ್ತದೆ ಎಂದು ವರದಿ ವಿವರಿಸಿದೆ.

ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಯ ಸ್ನಾತಕೋತ್ತರ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ, "ಪೊಲೀಸರ ದಣಿವು" ಕುರಿತು ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News