×
Ad

ಸಿಎಂಎಸ್ ಕಂಪ್ಯೂಟರ್ಸ್ ಸಂಸ್ಥೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

Update: 2016-08-29 12:38 IST

ಮಂಗಳೂರು, ಆ.29: ಸರಕಾರದ ಇ ಆಡಳಿತ ವ್ಯಾಪ್ತಿಗೊಳಪಡುವ ಮಂಗಳೂರು- ಒನ್ ಗುತ್ತಿಗೆ ಪಡೆದಿರುವ ಸಿಎಂಎಸ್ ಕಂಪ್ಯೂಟರ್ಸ್ ಸಂಸ್ಥೆಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೌರ್ಜನ್ಯಕ್ಕೊಳಗಾದ ಮಹಿಳಾ ಸಿಬ್ಬಂದಿ ಇಂದು ವೌನ ಪ್ರತಿಭಟನೆ ನಡೆಸಿದರು.

ಮಲ್ಲಿಕಟ್ಟೆಯ ಮಂಗಳೂರು ವನ್ ಕೇಂದ್ರದ ಎದುರು ನೌಕರರ ಹಿತರಕ್ಷಣಾ ವೇದಿಕೆ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ನಮ್ಮ ಮನೆ ನಮ್ಮ ಊರು, ಸಿಟಿಜನ್ ಫಾರಂ, ಪ್ರಜಾ ವಿಕಾಸ ಟ್ರಸ್ಟ್ ಸಹಿತ ವಿವಿಧ ಸಂಘಸಂಸ್ಥೆಗಳು ಬೆಂಬಲ ಸೂಚಿಸಿದ್ದವು.

ದೌರ್ಜನ್ಯಕ್ಕೊಳಗಾಗಿರುವ ಯುವತಿ ಮಾತನಾಡಿ, ಪಾಳಿಯಲ್ಲಿ ನಡೆಯುತ್ತಿದ್ದ ಕೆಲಸದ ಅವಧಿಯನ್ನು ಏಕಾಏಕಿಯಾಗಿ ಈ ತಿಂಗಳಿನಿಂದ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಕೇಂದ್ರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಂಡು ಇರುವ ಹಿರಿಯ ಸಿಬ್ಬಂದಿಯನ್ನು ಅವಮಾನಿಸುವ ಕಾರ್ಯವೂ ನಡೆಯುತ್ತಿದೆ ಎಂದು ದೂರಿದರು.

ಇನ್ನೋರ್ವ ನೊಂದ ಮಹಿಳೆ ಯೋಗಿನಿ ಮಾತನಾಡಿ, ಕೆಲಸದ ಅವಧಿಯನ್ನು ವಿಸ್ತರಿಸಿದ ಬಗ್ಗೆ ಸಣ್ಣ ಮಗುವನ್ನು ಹೊಂದಿರುವ ನಾನು ತನಗೆ ವಿನಾಯಿತಿ ನೀಡಬೇಕೆಂದು ಕೋರಿ ಪತ್ರ ಬರೆದಿದ್ದೆ. ಆದರೆ ಈ ಬಗ್ಗೆ ಸ್ಪಂದನೆ ನೀಡದೆ ನಾನು ಖುಷಿ ಬಂದ ಹಾಗೆ ಕಚೇರಿಗೆ ಬರುತ್ತೇನೆಂದು ಸುಳ್ಳು ಅಪವಾದ ನೀಡಿ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಿದರೆ ನನ್ನನ್ನು ಕಚೇರಿಯಲ್ಲಿ ಕೆಲಸ ಮಾಡದಂತೆ ತಡೆಹಿಡಿದು ಮತ್ತಷ್ಟು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲವಾರು ರೀತಿಯ ಕೆಲಸ ಕಾರ್ಯಗಳಿಗೆ ಮಂಗಳೂರು ವನ್ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ನೆಲೆಯಲ್ಲಿ ಇಂದು ಸಾಂಕೇತಿಕವಾಗಿ ವೌನವಾಗಿ ಪ್ರತಿಭಟಿಸುತ್ತಿದ್ದೇವೆ. ನಮಗಾಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಮಹಿಳೆಯರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನೌಕರರ ಹಿತರಕ್ಷಣಾ ವೇದಿಕೆ ಸಲಹೆಗಾರ ಬಿ.ಎಸ್. ಚಂದ್ರು, ನಾಗರಿಕರ ಪರವಾಗಿ ಜೆರಾಲ್ಡ್, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆಯ ವಿಜಯಾ ನಾಯರ್ ಮೊದಲಾವದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News