ಪ್ರವೀಣ್ ಪೂಜಾರಿ ಹತ್ಯೆ, ದಲಿತ ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ
ಮಂಗಳೂರು, ಆ.29: ಗೋರಕ್ಷಣೆ ಹೆಸರಿನಲ್ಲಿ ಅವಿಭಜಿತ ದ.ಕ. ಜಿಲ್ಲೆ ಸೇರಿದಂತೆ ದೇಶಾದ್ಯಂತ ಸಂಘ ಪರಿವಾರವು ಅರಾಜಕತೆಯನ್ನು ಸೃಷ್ಟಿಸಿದ್ದು, ದಲಿತರು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ, ದೌರ್ಜನ್ಯವನ್ನು ನಡೆಸುತ್ತಿದೆ ಎಂದು ಆರೋಪಿಸಿ ಎಡಪಕ್ಷಗಳಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಜಾತ್ಯತೀತ ಜನತಾದಳ, ಸಿಪಿಐ ಹಾಗೂ ಸಿಪಿಎಂನ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಇತ್ತೀಚೆಗೆ ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಲಾಯಿತು.
ಜೆಡಿಎಸ್‌ನ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಗೋರಕ್ಷಣೆಯ ಹೆಸರಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಹತ್ಯೆಗೈಯ್ಯುವಂತಹ ನೀಚ ಕಾರ್ಯದ ಮೂಲಕ ಹಿಂದುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಹಲ್ಲೆ ಪ್ರಕರಣಗಳು ಹೆಚ್ಚಿವೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗೋರಕ್ಷಣೆ ನೆಪದಲ್ಲಿ ಅರಾಜಕತೆ ಸೃಷ್ಟಿಸಲಾಗಿದೆ ಎಂದರು.
ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ಅಶಾಂತಿ ಸೃಷ್ಟಿಸಿದ್ದ ಸಂಘ ಪರಿವಾರ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತಂತೆ ಇಡೀ ರಾಜ್ಯದಲ್ಲಿ ದಂಗೆ ಏಳುವ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಆದರೆ, ತಮ್ಮದೇ ಪಕ್ಷದ ಪ್ರವೀಣ್ ಪೂಜಾರಿ ಹತ್ಯೆಯನ್ನು ತಮ್ಮದೇ ಜನರು ಮಾಡಿದಾಗ ವೌನವಹಿಸಿದೆ. ಸಂಘ ಪರಿವಾರದ ಗೋರಕ್ಷಣೆಯ ಮುಖವಾಡಕ್ಕೆ ಜಿಲ್ಲೆಯ ಹಿಂದುಳಿದ ವರ್ಗಗಳ ಯುವಕರು ಬಲಿಪಶುಗಳಾಗುತ್ತಿದ್ದಾರೆ ಎಂದವರು ಹೇಳಿದರು.
ಸಿಪಿಐನ ಮುಖಂಡ ವಿ.ಕುಕ್ಯಾನ್ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬಡವರ, ಕಾರ್ಮಿಕರ, ದಲಿತ ವರ್ಗದ ಹಿತರಕ್ಷಣೆಯ ಬಗ್ಗೆ ಆಸಕ್ತಿ ಇಲ್ಲ ಎಂದರು.
ಪ್ರತಿಭಟನೆಯಲ್ಲಿ ಸಿಪಿಎಂನ ಮುಖಂಡರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಜೆಡಿಎಸ್‌ನ ವಸಂತ ಪೂಜಾರಿ, ಸಿಪಿಎಂನ ಯಾದವ ಶೆಟ್ಟಿ ಮೊದಲಾದವರು ಮಾತನಾಡಿದರು.
ಜೆಡಿಎಸ್‌ನ ರಾಮ್ ಗಣೇಶ್, ಹರ್ಷಿತ್ ಸುವರ್ಣ, ಗಂಗಾಧರ ಉಳ್ಳಾಲ, ರಹ್ಮಾನ್ ಪುತ್ತೂರು, ಸಿಪಿಎಂನ ಜೆ. ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಜಯಂತಿ ಶೆಟ್ಟಿ, ಸಿಪಿಐನ ಎಚ್.ವಿ. ರಾವ್, ಕರುಣಾಕರ್ ಮೊದಲಾದವರು ಭಾಗವಹಿಸಿದ್ದರು.