ರಿಯೊ ಒಲಿಂಪಿಕ್ಸ್ ಮುಗಿಯಿತು,ಆದರೂ ಕ್ರೀಡಾ ಸಚಿವರ ಯಡವಟ್ಟುಗಳಿಗೆ ಕೊನೆಯಿಲ್ಲ!
ಹೊಸದಿಲ್ಲಿ,ಆ.29: ರಿಯೊ ಒಲಿಂಪಿಕ್ಸ್ ಅಂತ್ಯಗೊಂಡಿದ್ದರೂ ಕ್ರೀಡಾ ಸಚಿವ ವಿಜಯ ಗೋಯೆಲ್ ಅವರ ಯಡವಟ್ಟುಗಳು ಮುಂದುವರಿದಿವೆ. ಅಥ್ಲೀಟ್‌ಗಳ ಹೆಸರುಗಳ ತಪ್ಪು ಉಚ್ಚಾರಣೆ, ಹೆಸರುಗಳ ಕಲಬೆರಕೆ ಮತ್ತು ಬ್ರಾಜಿಲ್‌ನಲ್ಲಿ ಹೆಚ್ಚುಕಡಿಮೆ ಮಾನ್ಯತೆಯನ್ನೇ ಕಳೆದುಕೊಳ್ಳುವ ಮಟ್ಟದ ಅಧ್ವಾನದ ಬಳಿಕ ಇದೀಗ ಇನ್ನೊಂದು ಪ್ರಮಾದವೆಸಗಿದ್ದಾರೆ. ಬಳಿಕ ಇದೊಂದು ಬಾಯಿ ತಪ್ಪಿ ಬಂದ ಮಾತು ಎಂದು ಹೇಳಿ ತಿಪ್ಪೆ ಸಾರಿಸಿದ್ದಾರೆ.
ರಿಯೊ ‘ಚಿನ್ನದ ಪದಕಗಳ ’ ವಿಜೇತರಾದ ಪಿ.ವಿ.ಸಿಂಧು ಮತ್ತು ಸಾಕ್ಷಿ ಮಲಿಕ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಕುರಿತು ಗೋಯೆಲ್ ರವಿವಾರ ಇಲ್ಲಿ ಸುದ್ದಿಗಾರರಿಗೆ ವಿವರಗಳನ್ನು ನೀಡಿದ್ದರು. ಪ್ರಧಾನಿ ಮೋದಿಯವರು ಇಂದು ಖೇಲ್‌ರತ್ನ, ಧ್ಯಾನಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರನ್ನು ಭೇಟಿಯಾಗಿದ್ದರು. ಈ ಕ್ರೀಡಾಪಟುಗಳಲ್ಲಿ ಇಬ್ಬರು ರಿಯೊ ಚಿನ್ನದ ಪದಕ ವಿಜೇತರಾದ ಪಿ.ವಿ.ಸಿಂಧು ಮತ್ತು ಸಾಕ್ಷಿ ಮಲಿಕ್ ಅವರೂ ಸೇರಿದ್ದರು ಎಂದು ಗೋಯೆಲ್ ಮಾಧ್ಯಮಗಳ ಕ್ಯಾಮರಾದ ಮುಂದೆ ಹೇಳಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬ್ಯಾಡಿಂಟನ್‌ನಲ್ಲಿ ಬೆಳ್ಳಿ ಮತ್ತು ಸಾಕ್ಷಿ ಕುಸ್ತಿಯಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು.
ಸಚಿವರ ಈ ಅಧ್ವಾನದ ಹೇಳಿಕೆಯ ವೀಡಿಯೊ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡಿದೆ,ಸಾಲದ್ದಕ್ಕೆ ಇದೇ ಒಂದು ಜೋಕಿನ ವಿಷಯವಾಗಿದೆ ಮತ್ತು ಅವರ ಜ್ಞಾನ ಸಂಪತ್ತು ಮೂದಲಿಕೆಗೊಳಗಾಗಿದೆ.
ಬಾಯಿ ತಪ್ಪಿ ಹೇಳಿದ ಮಾತನ್ನೇ ಜನರು ದೊಡ್ಡದು ಮಾಡಬಾರದು, ಎಂದಾದರೊಮ್ಮೆ ಇಂತಹ ತಪ್ಪುಗಳಾಗುತ್ತವೆ. ನಾನು ಪದಕ ವಿಜೇತರು ಎಂದು ಹೇಳಲು ಬಯಸಿದ್ದೆ, ಆದರೆ ಚಿನ್ನದ ಪದಕ ವಿಜೇತರು ಎನ್ನುವುದು ಬಾಯಿಯಿಂದ ಹೊರಬಿದ್ದಿತ್ತು. ಅದೇನೇ ಇರಲಿ,ಮುಂಬರುವ ವರ್ಷಗಳಲ್ಲಿ ಚಿನ್ನದ ಪದಕಗಳು ನಮ್ಮದಾಗಹುದು ಎಂದು ಗೋಯೆಲ್ ಸಮಜಾಯಿಷಿ ನೀಡಿದ್ದಾರೆ.
ಗೋಯೆಲ್ ಹಿಂದೆ ಅಥ್ಲೀಟ್ ಸರ್ಬಾನಿ ನಂದಾ ಅವರಿಗೆ ಟ್ವಿಟರ್‌ನಲ್ಲಿ ಶುಭ ಕೋರುವಾಗ ಅವರ ಬದಲು ದ್ಯುತಿ ಚಾಂದ್ ಫೋಟೋ ಪೋಸ್ಟ್ ಮಾಡಿದ್ದರು. ಇದೇ ಟ್ವಿಟರ್‌ನಲ್ಲಿ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರ ಹೆಸರನ್ನು ದೀಪಾ ಕರ್ಮಾಣಕರ್ ಎಂದು ತಪ್ಪಾಗಿ ಬರೆದಿದ್ದರು.