ಪೊಳಲಿ ಸಮೀಪ ಬಾವಿಯಲ್ಲಿ ಬಂತು ಬಿಸಿನೀರು!

Update: 2016-08-29 12:47 GMT

ಬಂಟ್ವಾಳ, ಆ.29: ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಸಮೀಪದ ಮನೆಯೊಂದರ ಬಾವಿಯ ನೀರು ಇಂದು ಏಕಾಏಕಿ ಬಿಸಿನೀರಾಗಿ ಪರಿವರ್ತಿತವಾದ ಘಟನೆ ಬೆಳಕಿಗೆ ಬಂದಿದೆ. ಪೊಳಲಿ ದೇವಾಲಯದ ಸಮೀಪವಿರುವ ಬ್ಯಾಂಡ್ ವಾದಕ ಮೋಹನ್ ಎಂಬವರ ಮನೆಯ ಬಾವಿಯಲ್ಲಿ ಈ ವಿಸ್ಮಯ ಕಂಡುಬಂದಿದ್ದು, ಬಾವಿಯು ಈಗ ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಮೋಹನ್ ಎಂಬವರ ಮನೆಯ ಅಂಗಳದಲ್ಲಿ ವರ್ಷಪೂರ್ತಿ ನೀರು ದೊರೆಯುವ ಸಿಹಿನೀರಿನ ಬಾವಿಯಿದ್ದು, ಇಂದು ಮುಂಜಾನೆ ಮನೆಯ ನಿತ್ಯ ಕೆಲಸಗಳಿಗಾಗಿ ಬಾವಿಯ ನೀರು ಸೇದಿದಾಗ ಬಾವಿಯ ನೀರು ತಣ್ಣಗಿರದೆ ಬಿಸಿಯಾಗಿತ್ತು. ಮನೆಮಂದಿ ಎಲ್ಲರೂ ಅಚ್ಚರಿಗೊಂಡು ಮತ್ತೆ ಮತ್ತೆ ಬಾವಿಯಿಂದ ನೀರು ಸೇದಿ ಮೇಲಕ್ಕೆ ತೆಗೆದಿದ್ದು ಈ ವೇಳೆ ಬಾವಿಯ ನೀರು ಬಿಸಿಯಾಗಿರುವುದು ಕಂಡುಬಂದಿತ್ತು. ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಪರೀಕ್ಷಿಸಿದ್ದು, ಈ ವೇಳೆ ಕೂಡಾ ಬಾವಿಯ ನೀರು ಬಿಸಿಯಾಗಿರುವುದು ಕಂಡುಬಂದಿದೆ ಎನ್ನಲಾಗಿದೆ. 

ಬಾವಿಯ ನೀರು ಬಿಸಿಯಾಗಿರುವುದಕ್ಕೆ ಗಂಧಕದ ಪ್ರಭಾವ ಕಾರಣ ಎಂದು ತಿಳಿದುಬಂದಿದೆ. ಭೂಮಿಯ ಒಳಗಡೆ ಶಿಲಾಪದರದಲ್ಲಿ ಪಲ್ಲಟವಾದ ಸಂದರ್ಭದಲ್ಲಿ ಘರ್ಷಣೆಯಾಗುತ್ತದೆ. ಆಗ ನೀರು ಬಿಸಿಯಾಗುತ್ತದೆ ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News