ಪಂಪ್‌ವೆಲ್-ತಲಪಾಡಿ ರಾ.ಹೆ. ಜಂಕ್ಷನ್‌ಗಳಲ್ಲಿ ಪಾದಚಾರಿ ಮೇಲ್ಸೇತುವೆಗೆ ಸಚಿವ ಖಾದರ್ ನಿರ್ದೇಶನ

Update: 2016-08-29 13:03 GMT

ಮಂಗಳೂರು, ಆ.29: ನಗರದ ಪಂಪ್‌ವೆಲ್‌ನಿಂದ ತಲಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆ ಹಾಗೂ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಪ್ರಮುಖ ಜಂಕ್ಷನ್‌ಗಳಲ್ಲಿ ಪಾದಚಾರಿ ಮೇಲ್ಸೇತುವೆಗಳನ್ನು ರಚಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ನಿರ್ದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ರಾ.ಹೆದ್ದಾರಿ 66ರಲ್ಲಿನ ಅಗಲೀಕರಣ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಂತೆ ಅಧಿಕಾರಿಗಳ ಜೊತೆ ಅವರು ಚರ್ಚಿಸಿದರು.

ಈ ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಾದ ಎಕ್ಕೂರು, ಕಲ್ಲಾಪು, ಕುಂಪಲ, ಕೋಟೆಕಾರು ಹಾಗೂ ತೊಕ್ಕೊಟ್ಟುಗಳಲ್ಲಿ ಸಾರ್ವಜನಿಕರು ರಸ್ತೆ ದಾಟಲು ಅನುಕೂಲವಾಗವಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು. ಹೆದ್ದಾರಿಗಾಗಿ ಸುಮಾರು 780 ಕೋಟಿ ರೂ.ಗಳನ್ನು ವ್ಯಯಿಸುತ್ತಿರುವಾಗ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 10 ಕೋಟಿ ರೂ.ಗಳಲ್ಲಿ ಸರ್ವಿಸ್ ರಸ್ತೆ, ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲು ಪ್ರಾಧಿಕಾರ ಒತ್ತು ನೀಡಬೇಕು ಎಂದು ಅವರು ಹೇಳಿದರು.

ಸರ್ವಿಸ್ ರಸ್ತೆಯ ಬೋರ್ಡ್ ಇದೆ- ರಸ್ತೆಯೇ ಇಲ್ಲ!

ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹೆದ್ದಾರಿಯನ್ನು ಅಗಲಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಸಾರ್ವಜನಿಕರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಸರ್ವಿಸ್ ರಸ್ತೆಗಳನ್ನು ಮಾತ್ರ ಈ ಭಾಗದಲ್ಲಿ ಎಲ್ಲಿಯೂ ನಿರ್ಮಾಣ ಮಾಡದೆ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಹಾಗಿದ್ದರೂ ರಸ್ತೆಗಳಲ್ಲಿ ಸರ್ವಿಸ್ ರಸ್ತೆಯ ಬೋರ್ಡ್‌ಗಳನ್ನು ಹಾಕಿ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುವ ಕೆಲಸವೂ ಆಗುತ್ತಿದೆ. ತಲಪಾಡಿ ಬಳಿ ಟೋಲ್‌ಗೇಟ್ ನಿರ್ಮಾಣವಾಗಿ ಸರ್ವಿಸ್ ರಸ್ತೆಯನ್ನೇ ಮಾಡದೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಸಚಿವ ಖಾದರ್ ಸಭೆಯಲ್ಲಿ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೈದರು.

ಸಭೆಯಲ್ಲಿ ಉಪಸ್ಥಿತರಿದ್ದ ತಲಪಾಡಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸ್ಥಳೀಯರು ಕೂಡಾ ಆಕ್ಷೇಪಿಸುತ್ತಾ, ಫೈಸ್ಟಾರ್ ಹೊಟೇಲ್ ರೀತಿಯ ಟಾಲ್ಗೇಟ್ ಮಾಡಿದ್ದಾರೆ. ಆದರೆ ಸ್ಥಳೀಯರಿಗೆ ಬೇಕಾಗುವ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ಅವ್ಯವಸ್ಥೆಯಿಂದಾಗಿ ಸಾಕಷ್ಟು ಪ್ರಾಣಹಾನಿಗಳಾಗಿರುವುದರಿಂದ ಪ್ರಾಧಿಕಾರ ಸಾರ್ವಜನಿಕರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.

ಹೆದ್ದಾರಿ ಅಧಿಕಾರಿ ಸ್ಯಾಮಸನ್ ಎಂಬವರು ಪ್ರತಿಕ್ರಿಯಿಸುತ್ತಾ, ಭೂ ಸ್ವಾಧೀನಕ್ಕೆ ಕೆಲವು ಕಡೆ ಆಕ್ಷೇಪ ಇರುವುದರಿಂದ ತೊಂದರೆಯಾಗಿದೆ ಎಂದು ನುಡಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಗದೀಶ್, ಇತ್ತೀಚೆಗೆ ಈ ಸಂಬಂಧ ನಡೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿಲ್ಲ. ಭೂಮಿ ಒತ್ತುವರಿಗೆ ಆಕ್ಷೇಪ ಇರುವ ಕುರಿತಾದ ವಿವರನ್ನು ತನಗೆ ನೀಡಿ ಎಂದರು. ಮಾತ್ರವಲ್ಲದೆ, ಸರ್ವಿಸ್ ರಸ್ತೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯ ವಾಹನಗಳಿಂದ ಟೋಲ್‌ಗೇಟ್ ಶುಲ್ಕ ಪಡೆಯುವುದಕ್ಕೆ ಸಂಬಂಧಿಸಿ ಆರ್‌ಟಿಒ ಅಧಿಕಾರಿಗಳ ಮೂಲಕ ಅಲ್ಲಿನ ಸ್ಥಳೀಯರ ವಾಹನ ಸಂಖ್ಯೆಯನ್ನು ಗುರುತಿಸಿ ಅವರಿಗೆ ಪಾಸ್ ವ್ಯವಸ್ಥೆ ಅಥವಾ ವಿನಾಯಿತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಸಹಾಯಕ ಆಯುಕ್ತ ಡಾ. ಅಶೋಕ್ ಉಪಸ್ಥಿತರಿದ್ದರು.

ಜುಜುಬಿ ಹಣಕ್ಕೆ ಭೂಮಿ ಪಡೆದು ದಂಧೆ ನಡೆಸುತ್ತಾರೆ!

ರೈತರಿಂದ ಅತ್ಯಲ್ಪ ದರದಲ್ಲಿ ಭೂಮಿಯನ್ನು ಪಡೆಯುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅದನ್ನು ನವಯುಗ್ ಕನ್‌ಸ್ಟ್ರಕ್ಷನ್ ಸಂಸ್ಥೆಯವರಿಗೆ ನೀಡಿ ಅಲ್ಲಿ ಟೋಲ್‌ಗೇಟ್ ನಿರ್ಮಿಸಿ ಶುಲ್ಕ ಪಡೆಯುವ ಮೂಲಕ ದಂಧೆ ನಡೆಸುತ್ತಾರೆ. ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಿದ್ದರೂ ಅವರಿಗೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಹೆದ್ದಾರಿಗೆ ರಸ್ತೆ ಭೂಸ್ವಾಧೀನದ ಸಂದರ್ಭ ಮಾರುಕಟ್ಟೆ ದರವನ್ನೇ ನಿಗದಿಪಡಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News