ಸ್ಕಾರ್ಪಿನ್ ಮಾಹಿತಿ ಸೋರಿಕೆ ಪ್ರಕರಣ ಗಂಭೀರವಾಗಿ ಪರಿಗಣಿಸುತ್ತೇವೆ: ಅಡ್ಮಿರಲ್ ಲಾಂಬಾ
ಹೊಸದಿಲ್ಲಿ, ಆ.29: ಸ್ಕಾರ್ಪಿನ್ ಜಲಾಂತರ್ಗಾಮಿಯ ಮಾಹಿತಿ ಸೋರಿಕೆಯನ್ನು ‘ಅತ್ಯಂತ ಗಂಭೀರವಾಗಿ’ ಪರಿಗಣಿಸಲಾಗಿದೆ. ಆದರೆ, ಇದು ಕಳವಳದ ವಿಷಯವಲ್ಲವೆಂದು ನೌಕಾಪಡೆಯ ದಂಡನಾಯಕ ಎಡ್ಮಿರಲ್ ಸುನೀಲ್ ಲಾಂಬಾ ಹೇಳಿದ್ದಾರೆ. ಜಲಾಂತರ್ಗಾಮಿಯ ಸಾಮರ್ಥ್ಯದ ಕುರಿತಾದ 22 ಸಾವಿರ ಪುಟಗಳಷ್ಟು ಮಾಹಿತಿ ಸೋರಿಕೆಯಾದ ಬಳಿಕ ಇದು ಅವರ ಮೊದಲ ಪ್ರತಿಕ್ರಿಯೆಯಾಗಿದೆ.
ಯಾವುದೇ ಮಾಹಿತಿ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸ್ಕಾರ್ಪಿನ್ ಮಾಹಿತಿ ಸೋರಿಕೆಯನ್ನು ತಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತುರ್ತು ತನಿಖೆ ಆರಂಭಿಸುವಂತೆ ಫ್ರೆಂಚ್ ಸಂಸ್ಥೆ ಡಿಸಿಎನ್‌ಎಸ್‌ಗೆ ವಿನಂತಿಸಿದ್ದೇವೆಂದು ಲಾಂಬಾ ಹೊಸದಿಲ್ಲಿಯಲ್ಲಿ ಹೇಳಿದರು.
ಈ ಬಗ್ಗೆ ತನಿಖೆ ನಡೆಸಲು ರಕ್ಷಣಾ ಸಚಿವಾಲಯವು ಉನ್ನತಮಟ್ಟದ ಸಮಿತಿಯೊಂದನ್ನು ರಚಿಸಿದೆಯೆಂದು ಅವರು ಉಲ್ಲೇಖಿಸಿದ್ದರು.
ಸಮಿತಿಯ ವರದಿಯ ಆಧಾರದಲ್ಲಿ, ಯಾವ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ತಾವು ನಿರ್ಧರಿಸಲಿದ್ದೇವೆಂದು ಲಾಂಬಾ ತಿಳಿಸಿದರು.
ಸೋರಿಕೆಯು ಎಷ್ಟು ಗಂಭೀರವೆಂಬ ಪ್ರಶ್ನೆಗೆ ಇದು ಭಾರೀ ಕಳವಳದ ವಿಷಯವೇನಲ್ಲ. ಸಮಿತಿಯು ವಿಶ್ಲೇಷಣೆ ನಡೆಸಿದ್ದು, ಯಾವ ಮಾಹಿತಿ ಸೋರಿಕೆಯಾಗಿದೆ ಹಾಗೂ ಅದಕ್ಕೆ ಪರಿಹಾರ ಕ್ರಮಗಳೇನು ಎನ್ನುವುದನ್ನು ಪರಿಶೀಲಿಸಲಿದೆಯೆಂದು ಅವರುತ್ತರಿಸಿದರು.
ಉನ್ನತ ಸಮಿತಿಯು ಸೆ.20ರೊಳಗೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್‌ಗೆ ತನ್ನ ವಿಸ್ತೃತ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.