ಕಡಬ: ಇಚ್ಲಂಪಾಡಿಯ ಪ್ರಶಾಂತ್ ಅಸಹಜ ಸಾವು ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಧರಣಿ
ಕಡಬ, ಆ.29: 2015ರ ಎಪ್ರಿಲ್ 23ರಂದು ಇಚ್ಲಂಪಾಡಿ ಸಮೀಪದ ಸುಳ್ಯ ಮಜಲು ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಮುಳುಗಿ ಮೃತಪಟ್ಟಿರುವ ಇಚ್ಲಂಪಾಡಿ ಗ್ರಾಮದ ಮೂಡೆಜಾಲು ನಿವಾಸಿ ಪ್ರಶಾಂತ್ ಎಂಬ ದಲಿತ ಯುವಕನ ಅಸಹಜ ಸಾವು ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಇದರ ಮರುತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಹೇಳಿದ್ದಾರೆ.
ಅವರು, ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಕಡಬ ಹೋಬಳಿ ಶಾಖೆಯ ನೇತೃತ್ವದಲ್ಲಿ ಸೋಮವಾರ ಕಡಬ ಠಾಣೆಯ ಎದುರು ನಡೆದ ಧರಣಿಯ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.
ಪ್ರಶಾಂತ್‌ನನ್ನು ಅಕ್ರಮ ಮರಳುಗಾರಿಕೆ ಮಾಡಲು ಕೆಲಸಕ್ಕೆ ಮನೆಯಿಂದ ಕರೆದುಕೊಂಡು ಹೋಗಿದ್ದ ಸ್ಥಳೀಯ ನಿವಾಸಿ ಕುಂಞಿಮೋನು ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ತನಿಖೆಗೆ ಒಳಪಡಿಸಬೇಕು. ಪ್ರಶಾಂತನ ಸಾವು ಆಕಸ್ಮಿಕವಲ್ಲ, ಈ ಸಾವಿನ ಬಗ್ಗೆ ಮೊದಲಿನಿಂದಲೂ ಸಂಶಯ ವ್ಯಕ್ತಪಡಿಸಲಾಗಿತ್ತು. ಇಚ್ಲಂಪಾಡಿ ಗ್ರಾಮದ ಉರೆಜಾಲು ಚರ್ಚ್‌ನಲ್ಲಿ ಗಾರೆ ಕೆಲಸಕ್ಕೆ ಸಹಾಯಕನಾಗಿ ಉರೆಜಾಲು ನಿವಾಸಿ ಎಂ.ಕೆ ಕುಂಞಮೋನ್ ಎಂಬವರು ಬಲವಂತವಾಗಿ ಪ್ರಶಾಂತನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರಶಾಂತ್‌ನ ತಾಯಿ ಕುಸುಮಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಶಾಂತ್ ಗುಂಡ್ಯ ಹೊಳೆ ಸುಳ್ಯಮಜಲು ಎಂಬಲ್ಲಿ ಅಕ್ರಮ ಮರಳುಗಾರಿಕೆಗೆ ಬಲಿಯಾಗಿದ್ದಾರೆ. ಆದರೆ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತನ ತಾಯಿ ಕುಸುಮಾ ದೂರು ನೀಡಿದ್ದರೂ ಇದುವರೆಗೆ ನ್ಯಾಯ ದೊರಕಿಲ್ಲ. ಈ ಬಗ್ಗೆ ಪ್ರಶಾಂತ್ ಯಾಕೆ ಹೊಳೆಗೆ ಹೋಗಿದ್ದಾನೆ ಎಂದು ಪ್ರಶ್ನಿಸಿದಾಗ ಆತ ಮರಳು ತೆಗೆಯಲು ಸಂಗಡಿಗರ ಜೊತೆ ನದಿಗೆ ಹೋಗಿರುವುದಾಗಿ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇದೊಂದು ಸ್ಪಷ್ಟವಾದ ಕೊಲೆ ಪ್ರಕರಣ ಎಂದು ಮನಗಂಡಿದ್ದು ಪ್ರಶಾಂತ್‌ನ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಕಡಬ ಠಾಣೆಗೆ, ವಿಶೇಷ ತಹಶೀಲ್ದಾರ್‌ರಿಗೆ, ಉಪ್ಪಿನಂಗಡಿ ವೃತ್ತ ನಿರೀಕ್ಷಕರಿಗೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವ ಸ್ಪಂದನೆಯೂ ಇಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮೃತ ಪ್ರಶಾಂತನ ತಾಯಿ ಕುಸುಮಾ, ನನ್ನ ಮಗನನ್ನು ಕಳೆದುಕೊಂಡ ನೋವು ನನಗೆ ಹೋಗಿಲ್ಲ, ನನ್ನ ಮಗನನ್ನು ಕಷ್ಟಪಟ್ಟು ಕೂಲಿ ಕೆಲಸ ಮಾಡಿಕೊಂಡು ದ್ವಿತೀಯ ಪಿಯುಸಿ ಓದಿಸಿದ್ದೇನೆ. ಆದರೆ ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಕುಂಞಿಮೋನ್‌ರವರು ಮನೆಗೆ ಬಂದು ಕೆಲಸಕ್ಕೆ ಬಾ ಎಂದು ಕರೆದಿದ್ದರು, ಆದರೆ ಹೋಗುವುದು ಬೇಡ ಎಂದಿದ್ದರೂ ಒತ್ತಾಯವಾಗಿ ಪ್ರಶಾಂತನನ್ನು ಬೈಕಿನಲ್ಲಿ ಕುಂಞಮೋನ್ ಕರೆದುಕೊಂಡು ಹೋಗಿದ್ದರು. ಅವರನ್ನು ವಿಚಾರಣೆ ನಡೆಸಿ, ನಮಗೆ ನ್ಯಾಯ ಕೊಡಬೇಕು ಇಲ್ಲದಿದ್ದರೆ ನಾನು ಠಾಣೆಯ ಎದುರಿನಲ್ಲಿ ಸಾಯುತ್ತೇನೆ ಎಂದು ದುಃಖದಿಂದ ಹೇಳಿದರು.
ಪ್ರತಿಭಟನೆಯಲ್ಲಿ ದ.ಸೇ.ಸ.ಯ ತಾಲೂಕು ಉಪಾಧ್ಯಕ್ಷ ಅಣ್ಣಿ ಎಳ್ತಿಮಾರ್, ಇಚ್ಲಂಪಾಡಿ ಗ್ರಾಮ ಸಮಿತಿಯ ಉಪಾಧ್ಯಕ್ಷ ಕುದ್ಮಾರ, ಸಂಚಾಲಕ ರಾಜಪ್ಪಧರಣಿಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಡಬ ಆರಕ್ಷಕ ಉಪನಿರೀಕ್ಷಕ ಉಮೇಶ್ ಉಪ್ಪಳಿಕೆ, ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಪ್ರಕರಣ ದಾಖಲಿಸುವುದು ನಾವಲ್ಲ, ಗಣಿ ಇಲಾಖೆ ಮತ್ತು ತಹಶೀಲ್ದಾರ್‌ಗೆ ಮಾತ್ರ ಅಧಿಕಾರ ಇದೆ. ಅವರು ಪ್ರಕರಣ ಹಸ್ತಾಂತರ ಮಾಡಿದರೆ ನಾವು ತನಿಖೆ ನಡೆಸುತ್ತೇವೆ. ನೀವು ನೀಡಿದ ದೂರಿಗೆ ಈಗಾಗಲೇ ಹಿಂಬರಹ ನೀಡಿದ್ದೆವೆ. ಈಗಾಗಲೇ ಈ ಪ್ರಕರಣವನ್ನು ತನಿಖೆ ನಡೆಸಲಾಗಿದೆ. ಆದರೆ ನಮ್ಮ ತನಿಖೆಯಲ್ಲಿ ವಿಶ್ವಾಸ ಇಲ್ಲದಿದ್ದರೆ ನೀವು ಮೇಲಧಿಕಾರಿಗಳಿಗೂ ದೂರು ನೀಡಬಹುದು ಎಂದು ಹೇಳಿದರು. ಕುಂಞಮೊನ್ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಕಡಬ ಎಸೈಯವರಿಂದ ಯಾವುದೇ ಉತ್ತರ ಬಾರದೆ ಇರುವುದರಿಂದ ಪ್ರತಿಭಟನೆಯನ್ನು ಮತ್ತೂ ಮುಂದುವರಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ಆಗಮಿಸಿದ ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ ಮಾತುಕತೆ ನಡೆಸಿದರು. ಬಳಿಕ ಕುಂಞಮೋನ್‌ರ ವಿರುದ್ಧ ಪ್ರಶಾಂತನನ್ನು ಮನೆಯಿಂದ ಕರೆದುಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಧರಣಿನಿರತರು ಧರಣಿಯನ್ನು ಹಿಂದಕ್ಕೆ ಪಡೆದುಕೊಂಡರು.
ಈ ಸಂದರ್ಭ ಪ್ರಮುಖರಾದ ಅಚ್ಯುತ ಗುತ್ತಿಗಾರು, ಉಮೇಶ್ ಎನ್. ಸುಳ್ಯ, ಲಿಂಗಪ್ಪನೆಕ್ಕಿಲು, ಕೆ.ಪಿ.ಆನಂದ, ರಮೇಶ್ ಎನ್. ಪೊಡಿಯ ಪೆರ್ಲದಕೆರೆ ಮೊದಲಾದವರು ಉಪಸ್ಥಿತರಿದ್ದರು.
ಧರಣಿಯ ವೇಳೆ ಮೃತ ಪ್ರಶಾಂತನ ತಾಯಿ ಅಸ್ವಸ್ಥ
ಧರಣಿಯ ಸಂದರ್ಭದಲ್ಲಿ ಪ್ರಶಾಂತನ ತಾಯಿಯು ಮಾತನಾಡುತ್ತಾ ಕುಸಿದು ಬಿದ್ದಿದ್ದು, ಠಾಣಾಧಿಕಾರಿಯವರು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಒತ್ತಾಯಿಸಿದರೂ ನಿರಾಕರಿಸಿದ ಧರಣಿನಿರತರು, 108 ಆಂಬ್ಯುಲೆನ್ಸ್‌ಗೆ ಕರೆಮಾಡಿದರು. ಕಡಬದ ಆ್ಯಂಬುಲೆನ್ಸ್ ತುರ್ತಾಗಿದ್ದರಿಂದ ಅರ್ಧ ತಾಸು ತಡವಾಗಿ ಸುಬ್ರಹ್ಮಣ್ಯದಿಂದ ಆಗಮಿಸಿದ 108 ವಾಹನದ ಮೂಲಕ ಕುಸುಮಾರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು.