ಕಾನೂನು ಪಾಲನೆಯಲ್ಲಿ ಪೊಲೀಸರ ತಾರತಮ್ಯ: ಪಿಎಫ್‌ಐ ಆರೋಪ
ಮಂಗಳೂರು, ಆ. 29: ಕಾನೂನು ಪಾಲನೆಯಲ್ಲಿ ಪೊಲೀಸರು ತಾರತಮ್ಯ ಎಸಗುತ್ತಿದ್ದು, ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಪೊಲೀಸರು ನಿರಂತರ ಮುಸ್ಲಿಂ ಸಮುದಾಯವನ್ನು ಗುರಿಪಡಿಸುತ್ತಿದೆ ಎಂದು ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಆರೋಪಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿಗಳ ಅಟ್ಟಹಾಸದ ವಿರುದ್ಧ, ಪೊಲೀಸ್ ದೌರ್ಜನ್ಯ ಮತ್ತು ತಾರತಮ್ಯ ವಿರುದ್ಧ ಪಿಎಫ್‌ಐ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಿಕೊಂಡು ಬಂದಿದೆ. ಆದರೆ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಪ್ರಕರಣದಲ್ಲಿ ಮುಸ್ಲಿಂ ಯುವಕನೊಬ್ಬನನ್ನು ಬಂಧಿಸಿದರೆ, ಅಂತಹ ಯುವಕರ ಮೇಲೆ ಗೂಂಡಾ ಕಾಯ್ದೆಯಂತಹ ಗಂಭೀರ ಪ್ರಕರಣ ದಾಖಲಿಸಿ ಪ್ರಜಾಸತ್ತಾತ್ಮಕ ಹೋರಾಟವನ್ನು ಬುಡದಿಂದಲೇ ಮಟ್ಟಹಾಕುವ ಪ್ರಯತ್ನ ನಡೆಯುತ್ತಿದೆ ಎಂದರು.
ಚರಣ್ ಕೊಲೆ ಪ್ರಕರಣದಲ್ಲೂ ಪೊಲೀಸರು ಅಮಾಯಕ ಸೈಫುಲ್ಲಾ ಎಂಬವರನ್ನು ಬಂಧಿಸಿದ್ದಾರೆ. ಸೈಫುಲ್ಲಾ ಅವರು ಚರಣ್ ಕೊಲೆ ಪ್ರಕರಣದಲ್ಲಿ ಶಾಮೀಲಾಗಿಲ್ಲ. ಅಮಾಯಕರೊಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಪೊಲೀಸರು ಯಾವ ಒತ್ತಡಕ್ಕೂ ಮಣಿಯದೆ ಕಾನೂನಾತ್ಮಕವಾಗಿ ಕಾರ್ಯಾಚರಿಸಬೇಕು. ಇಲ್ಲದಿದ್ದರೆ ಸಂಘಟನೆಯ ವತಿಯಿಂದ ಪೊಲೀಸ್ ಇಲಾಖೆಯ ವಿರುದ್ಧ ಹೋರಾಟ ನಡೆಸುವುದಾಗಿ ಹನೀಫ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಮಜೀದ್ ಜೋಕಟ್ಟೆ, ಸಿರಾಜುದ್ದೀನ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಅಬೂಬಕರ್ ಸಿದ್ದೀಕ್ ಉಪಸ್ಥಿತರಿದ್ದರು.
ಪೊಲೀಸ್ ಅನ್ಯಾಯದ ವಿರುದ್ಧ ಪಿಎಫ್‌ಐ ಪ್ರತಿಭಟನೆ
ಚರಣ್ ಕೊಲೆ ಪ್ರಕರಣದಲ್ಲಿ ಅಮಾಯಕನ ಬಂಧನ ಹಾಗೂ ಪೊಲೀಸರ ಅನ್ಯಾಯದ ವಿರುದ್ಧ ಪಿಎಫ್‌ಐ ಕಾರ್ಯಕರ್ತರು ಇಂದು ಮಧ್ಯಾಹ್ನ ಪೊಲೀಸ್ ಕಮಿಷನರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಚರಣ್ ಕೊಲೆ ಪ್ರಕರಣದಲ್ಲಿ ಪೊಲೀಸರು ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸಿ, ಅನ್ಯಾಯ ಎಸಗಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಪಿಎಫ್‌ಐನ ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದರು.