ನೌಕಾಪಡೆಯ ವಿಮಾನದಿಂದ ಎರಡು ಬಾಹ್ಯ ಇಂಧನ ಟ್ಯಾಂಕ್‌ಗಳು ಧರೆಗೆ
ವಿಶಾಖಪಟ್ಟಣ, ಆ.29: ನೌಕಾಪಡೆಯ ಮಿಗ್-29ಕೆ ವಿಮಾನವೊಂದರ ಎರಡು ಬಾಹ್ಯ ಇಂಧನ ಟ್ಯಾಂಕ್‌ಗಳು ಇಂದು ವಿಶಾಖಪಟ್ಟಣದ ಸಿಐಎಸ್‌ಎಫ್ ವಸತಿ ಸಮುಚ್ಚಯದ ಸಮೀಪ ಹಾಗೂ ಐಎನ್‌ಎಸ್ ಡೇಗಾ ನೌಕಾಪಡೆಯ ವಿಮಾನ ನಿಲ್ದಾಣದ ಸಮೀಪ ಪ್ರತ್ಯೇಕವಾಗಿ ಕಳಚಿ ಬಿದ್ದಿವೆ. ಆದಾಗ್ಯೂ ಪೈಲಟ್‌ಗಳು ಯಾವುದೇ ಅಪಾಯವಿಲ್ಲದೆ ಪವಾಡ ಸದೃಶ ಪಾರಾಗಿದ್ದಾರೆ.
ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಬೆಳಗ್ಗೆ 10 ಗಂಟೆಯ ವೇಳೆ ಮಿಗ್ ಮಾಮೂಲಿ ತರಬೇತಿ ಹಾರಾಟಕ್ಕಾಗಿ ಬಾನಿಗೇರುತ್ತಿದ್ದ ವೇಳೆ ಹೆಚ್ಚುವರಿ ಇಂಧನ ಹೊತ್ತಿದ್ದ ಟ್ಯಾಂಕ್ ಕಳಚಿ ಬಿದ್ದಿತು. ಆಗ ಐಎನ್‌ಎಸ್ ಡೇಗಾ ರನ್‌ವೇಯಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿತೆಂದು ನೌಕಾಪಡೆಯ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ಆರಿಸಿದರು. ಬೆಂಕಿಯಿಂದ ಯಾರಿಗೂ ಗಾಯಗಳಾಗಿಲ್ಲ. ವಿಮಾನವಾಗಲಿ ರನ್‌ವೇ ಆಗಲಿ ಜಖಂಗೊಂಡಿಲ್ಲವೆಂದು ಅವು ಹೇಳಿವೆ.
ಆಸನದಲ್ಲಿದ್ದ ಇನ್ನೊಂದು ಟ್ಯಾಂಕನ್ನು ಕಳಚಿ ಎಸೆಯುವಂತೆ ಪೈಲಟ್‌ಗೆ ಸೂಚನೆ ನೀಡ ಲಾಯಿತು. ಆದರೆ ವ್ಯವಸ್ಥೆಯಲ್ಲಿ ದೋಷವಿದ್ದು ದರಿಂದ ಅದು ಸಾಧ್ಯವಾಗಲಿಲ್ಲ. ವಿಮಾನವು ಇಳಿಯಲೆಂದು ಮರಳಿ ಬಂದಾಗ ಎರಡನೆಯ ಟ್ಯಾಂಕ್ ಸಿಐಎಸ್‌ಎಫ್ ವಸತಿ ಸಮುಚ್ಚಯದ ಬಳಿ ಕಳಚಿ ಬಿತ್ತು.
ಆದಾಗ್ಯೂ ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.