ಖ್ಯಾತ ಕಲಾ ಚರಿತ್ರೆಕಾರ ದೀನನಾಥ ನಿಧನ
ಭುವನೇಶ್ವರ, ಆ.29: ಖ್ಯಾತ ಚಿತ್ರಕಾರ, ಲೇಖಕ ಹಾಗೂ ಕಲಾ ಚರಿತ್ರೆಕಾರ ದೀನನಾಥ ಪಥಿ ಇಲ್ಲಿನ ಆಸ್ಪತ್ರೆಯೊಂದರಲ್ಲಿಂದು ಹೃದಯಸ್ತಂಭನದಿಂದ ನಿಧನ ರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಎದೆನೋವು ಕಾಣಿಸಿಕೊಂಡ ಬಳಿಕ ಪಥಿಯವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.
ಬಹುಮುಖ ಪ್ರತಿಭೆಗೆ ಹೆಸರಾಗಿದ್ದ ಪಥಿ ಹೊಸದಿಲ್ಲಿ ಹಾಗೂ ಭುವನೇಶ್ವರಗಳ ಲಲಿತಾಕಲಾ ಅಕಾಡಮಿಯ ಮಾಜಿ ಕಾರ್ಯದರ್ಶಿಯಾಗಿದ್ದು, ಒಡಿಶಾದಲ್ಲಿ ಕಲಾ ಚಳವಳಿಯ ಆದ್ಯ ಪ್ರವರ್ತಕರಾಗಿದ್ದರು.
ಭುವನೇಶ್ವರದ ಬಿ.ಕೆ. ಕಾಲೇಜ್ ಆಫ್ ಆರ್ಟ್ ಆ್ಯಂಡ್ ಕ್ರಾಫ್ಟ್ಸ್‌ನ ಸ್ಥಾಪಕ ಪ್ರಿನ್ಸಿಪಾಲರಾಗಿದ್ದ ಅವರು, ತನ್ನ ಕಲೆ, ಕವನ ಹಾಗೂ ಬೋಧನೆಗಳಿಂದ ಒಡಿಶಾದ ಕಲೆಯನ್ನು ವಿಶ್ವಾದ್ಯಂತ ಪಸರಿಸಲು ಜೀವನವನ್ನು ಮುಡಿಪಾಗಿಟ್ಟಿದ್ದರು.
ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಪಥಿ, ಚಿತ್ರಕಲೆಗಾಗಿ ‘ಭಾರತದ ರಾಷ್ಟ್ರಪತಿಯ ರಜತ ಫಲಕ’ದ ಗೌರವಕ್ಕೆ ಪಾತ್ರರಾಗಿದ್ದರು. ಭಾರತೀಯ ಕಲಾ ಚರಿತ್ರೆಯ ಸಂಶೋಧನೆಗೆ ನೀಡಿದ ಕೊಡುಗೆಗಾಗಿ ಅವರು, ಸ್ವಿಝರ್ಲೆಂಡ್‌ನ ರೈಟ್‌ಬರ್ಗ್ ಸೊಸೈಟಿಯ ಪ್ರತಿಷ್ಠಿತ ರೈಟ್ ಬರ್ಗ್ ಪ್ರಶಸ್ತಿಗೆ 2014ರಲ್ಲಿ ನಾಮಕರಣಗೊಂಡಿದ್ದರು.