ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ ದುರಸ್ತಿ ವಿಳಂಬ ಖಂಡಿಸಿ ನಾಳೆ ಪ್ರತಿಭಟನೆ
ಮಂಜೇಶ್ವರ, ಆ.29: ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ ದುರಸ್ತಿ ವಿಳಂಬ ಖಂಡಿಸಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಆ.31ರಂದು ಬೆಳಗ್ಗೆ 8ಕ್ಕೆ ಲೋಕೋಪಯೋಗಿ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬದಿಯಡ್ಕದಿಂದ ಏತಡ್ಕ ಮೂಲಕ ಕರ್ನಾಟಕದ ಸುಳ್ಯಪದವಿಗೆ ಸಾಗುವ ಈ ರಸ್ತೆ ದುರಸ್ತಿ ಕಾಣದೆ ಹಲವು ವರ್ಷಗಳಾದವು. ಬೆಳ್ಳೂರು, ಕುಂಬಡಾಜೆ. ಎಣ್ಮಕಜೆ ಹಾಗೂ ಬದಿಯಡ್ಕ ಗ್ರಾಪಂ ವ್ಯಾಪ್ತಿಯ ಜನರು ಬದಿಯಡ್ಕ ಹಾಗೂ ಇನ್ನಿತರ ಕಡೆಗಳಿಗೆ ಸಾಗಲು ಈ ರಸ್ತೆಯನ್ನು ಬಳಸಬೇಕು. ನೂರಾರು ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಪ್ರಯಾಣಿಸುತ್ತಾರೆ. ಈ ರಸ್ತೆಯ ಮೂಲಕ 5 ಬಸ್‌ಗಳು ಈ ಹಿಂದೆ ಚಲಿಸುತ್ತಿತ್ತು. ಆದರೆ ಹೊಂಡಗಳ ಆಳ ಹೆಚ್ಚಾದ ಹಿನ್ನೆಲೆಯಲ್ಲಿ ಬಸ್‌ಗಳು ಯಾನ ಮೊಟಕುಗೊಳಿಸಿವೆ. ಇದರಿಂದಾಗಿ ವಿದ್ಯಾರ್ಥಿಗಳು, ಮಹಿಳೆಯರು ಸಂಕಷ್ಟಕೊಳಗಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿನ್ ಕೇಳೋಟ್, ವಿ.ಬಾಲಕೃಷ್ಣ ಶೆಟ್ಟಿ, ಬಿ. ರಾಮ ಪಾಟಾಳಿ, ವೆಂಕಟ್ರಮಣ ಭಟ್, ಅನ್ವರ್, ಜೀವನ್ ಥಾಮಸ್, ಅಶ್ರಫ್ ಮುನಿಯೂರು, ಅಖಿಲೇಶ್ ಯಾದವ್ ನಗುಮುಗಂ ಉಪಸ್ಥಿತರಿದ್ದರು.