ಮನಪಾ: 2,000 ನಿವೇಶನರಹಿತರಿಗೆ ವಸತಿಗೆ ಅನುಮೋದನೆ

Update: 2016-08-30 15:06 GMT

ಮಂಗಳೂರು, ಆ.30: ನಗರ ವಸತಿ ಯೋಜನೆಯಡಿ 2000 ನಿವೇಶನರಹಿತರಿಗೆ ವಸತಿ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಂದು ಅನುಮೋದನೆ ನೀಡಲಾಯಿತು. ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದ್ದು, ಜಿ+3 ಮಾದರಿಯಲ್ಲಿ ಕೇಂದ್ರ, ರಾಜ್ಯ ಹಾಗೂ ಮಹಾನಗರ ಪಾಲಿಕೆ ಸಹಾಯಧನದೊಂದಿಗೆ ಈ ಯೋಜನೆ ಹಂತ ಹಂತವಾಗಿ ಜಾರಿಗೆ ಬರಲಿದೆ.

ನಗರದ ಪದವು ಗ್ರಾಮದ ರಾಜೀವ್ ನಗರದ ಸರ್ವೆ ನಂ. 82ರ 4.50 ಎಕರೆ, ಇಡ್ಯಾ ಗ್ರಾಮದ ಆಶ್ರಯ ಕಾಲನಿಯ ಸರ್ವೆ ನಂ. 16ರಲ್ಲಿನ 3.86 ಎಕರೆ ಹಾಗೂ ಇಡ್ಯಾ ಗ್ರಾಮದ ಸರ್ವೆ ನಂ. 108 1ಎ ಮತ್ತು 1ಬಿಯ 1.85 ಎಕರೆ ಜಮೀನಿನಲ್ಲಿ ಈ ವಸತಿ ಸಂಕೀರ್ಣಗಳು ತಲೆ ಎತ್ತಲಿವೆ ಎಂದು ಆಯುಕ್ತ ಮುಹಮ್ಮದ್ ನಝೀರ್ ಸಭೆಗೆ ಮಾಹಿತಿ ನೀಡಿದರು.

ತಲಾ 5 ಲಕ್ಷ ರೂ. ಘಟಕ ವೆಚ್ಚದಲ್ಲಿ ಈ ಮನೆಗಳು ನಿರ್ಮಾಣಗೊಳ್ಳಲಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ಮಹಾನಗರ ಪಾಲಿಕೆಯಿಂದ ಸಹಾಯಧನ ತಲಾ 1 ಲಕ್ಷ ರೂ., ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ(ಆರ್‌ಜಿಎಚ್‌ಎಚ್‌ಸಿಎಲ್)ದಿಂದ 1.80 ಲಕ್ಷ ರೂ. ಸಹಾಯಧನ, ಕೇಂದ್ರ ಪುರಸ್ಕೃತ ಪಿಎಂಎವೈ ಯೋಜನೆಯಡಿ 1.50 ಲಕ್ಷ ರೂ., ಫಲಾನುಭವಿಯ ಕೊಡುಗೆ 20,000 ರೂ. ಹಾಗೂ 50,000 ರೂ. ಸಾಲದಲ್ಲಿ ಮನೆ ನಿರ್ಮಾಣವಾಗಲಿದೆ. ಸಾಮಾನ್ಯ ವರ್ಗದವರಿಗೆ ಆರ್‌ಜಿಎಚ್‌ಎಚ್‌ಸಿಎಲ್‌ನ 1.20 ಲಕ್ಷ ರೂ., ಪಿಎಂಎವೈನಿಂದ 1.50 ಲಕ್ಷರೂ., ಫಲಾನುಭವಿಯ ಕೊಡುಗೆ 30,000 ರೂ., ಮನಪಾದಿಂದ 70,000 ರೂ. ಹಾಗೂ ಉಳಿದ 1.30 ಲಕ್ಷ ರೂ. ಸಾಲದ ರೂಪದಲ್ಲಿ ಮನೆ ನಿರ್ಮಾಣವಾಗಲಿದೆ. ಯೋಜನೆಗಾಗಿ ಮಹಾನಗರ ಪಾಲಿಕೆಯ ದಕ್ಷಿಣ ಕ್ಷೇತ್ರದಿಂದ 3,135 ಅರ್ಜಿಗಳು ಬಂದಿದ್ದು, 1,100 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರದಲ್ಲಿ 2,400 ಅರ್ಜಿಗಳಲ್ಲಿ 900 ಫಲಾನುಭವಿಗಳು ಸೇರಿದಂತೆ ಒಟ್ಟು 2,000 ಮಂದಿಗೆ ಈ ಯೋಜನೆಯಡಿ ವಸತಿ ಲಭ್ಯವಾಗಲಿದೆ ಎಂದು ಆಯುಕ್ತರು ವಿವರ ನೀಡಿದರು. 

ಮನಪಾದಿಂದ ಈ ಯೋಜನೆಗಾಗಿ ಸುಮಾರು 14 ಕೋಟಿ ರೂ.ಗಳನ್ನು ಸಹಾಯಧನದ ರೂಪದಲ್ಲಿ ನೀಡಬೇಕಾಗಿರುವುದರಿಂದ ಯಾವ ಮೂಲದಿಂದ ಇದನ್ನು ಕ್ರೋಢೀಕರಿಸಲಾಗುತ್ತದೆ ಎಂದು ವಿಪಕ್ಷದ ಸದಸ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಶಾಸಕರ ನೇತೃತ್ವದ ಆಶ್ರಯ ಸಮಿತಿಯ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಮನಪಾದ ಪಾಲಿದ್ದರೂ, ಈ ಬಗ್ಗೆ ಮನಪಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ವಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇದು ಕೇಂದ್ರ, ರಾಜ್ಯ ಹಾಗೂ ಮನಪಾದ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮವಾಗಿದ್ದು, ಇದು ಹಂತ ಹಂತವಾಗಿ ಎರಡು ಮೂರು ವರ್ಷಗಳ ಅವಧಿಯಲ್ಲಿ ನಡೆಯಲಿದೆ. ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿರುವುದರಿಂದ ಇದಕ್ಕೆ ಅನುಮೋದನೆ ನೀಡಿ ಮುಂದೆ ಯಾವ ರೀತಿಯಲ್ಲಿ ಮನಪಾದ ಹಣ ಕ್ರೋಢೀಕರಿಸಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಮೇಯರ್ ಹರಿನಾಥ್ ಸ್ಪಷ್ಟನೆ ನೀಡಿದರು.

ಮಳೆಗಾಲದಲ್ಲೂ ಕುಡಿಯಲು ನೀರಿಲ್ಲ!

ಮಳೆಗಾಲದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಯಲ್ಲಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಅಧಿಕಾರಿಗಳು ಪ್ರತಿಕ್ರಿಯಿಸುತ್ತಾ, ಕಳೆದ 15 ದಿನಗಳಿಂದ ಪಂಪ್‌ವೆಲ್‌ನಲ್ಲಿ ಸರ್ಕಲ್ ಕೆಲಸ ನಡೆಯುತ್ತಿರುವ ಕಾರಣದಿಂದ ಪೈಪ್‌ನಲ್ಲಿ ಸಮಸ್ಯೆ ಕಂಡುಬಂದಿದೆ ಎಂದರು. ನಗರದ 7-8 ವಾರ್ಡ್‌ಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.

ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮ

ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ ಎಂಬ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಮೇಯರ್ ಹರಿನಾಥ್, ನಗರದ ಹಲವು ಕಡೆಗಳಲ್ಲಿ ರಸ್ತೆಗಳು ಹಾಳಾಗಿದ್ದು ಅವುಗಳನ್ನು ದುರಸ್ತಿ ಮಾಡುವಂತೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

ಉಪ ಮೇಯರ್ ಸುಮಿತ್ರಾ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸ್ ಲಾಟ್ ಪಿಂಟೋ, ಅಪ್ಪಿ, ಬಶೀರ್ ಅಹಮ್ಮದ್, ಕವಿತಾ ಸನಿಲ್ ಉಪಸ್ಥಿತರಿದ್ದರು.

ನಗರದಲ್ಲಿ ಟೈಗರ್ ಕಾರ್ಯಾಚರಣೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಪಾದಚಾರಿಗಳಿಗೆ ತೊಂದರೆ ಆಗುವ ರೀತಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬೀದಿ ಬದಿ ವ್ಯಾಪಾರ ಹಾಗೂ ಗೂಡಂಗಡಿಗಳನ್ನು ತೆರವುಗೊಳಿಸಲು ಬುಧವಾರದಿಂದ ನಗರದಲ್ಲಿ ಟೈಗರ್ ಕಾರ್ಯಾಚರಣೆ ಆರಂಭಗೊಳ್ಳಲಿದೆ.

ನಗರದಲ್ಲೆಡೆ ಅನಧಿಕೃತ ಬದಿಬದಿ ವ್ಯಾಪಾರಸ್ಥರಿಂದಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರಾದ ಪೂರ್ಣಿಮಾ, ರಾಜೇಂದ್ರ ಕುಮಾರ್, ಪ್ರೇಮಾನಂದ ಶೆಟ್ಟಿ, ಮಹಾಬಲ ಮಾರ್ಲ, ಡಿ.ಕೆ. ಅಶೋಕ್ ಸೇರಿದಂತೆ ಸದಸ್ಯರು ಪಕ್ಷಾತೀತವಾಗಿ ಆಕ್ಷೇಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಹರಿನಾಥ್, ಎರಡು ತಿಂಗಳ ಹಿಂದಿನ ಸಭೆಯಲ್ಲಿ ಮಾರುಕಟ್ಟೆ ಪರಿಸರ ಸೇರಿದಂತೆ ಪಾದಚಾರಿಗಳಿಗೆ ತೊಂದರೆ ಆಗುವ ಎಲ್ಲಾ ರೀತಿಯ ವ್ಯವಸ್ಥೆಯನ್ನು ತೆರವುಗೊಳಿಸುವಂತೆ ಸರ್ವಾನುಮತದಿಂದ ನಿರ್ಣಯವಾಗಿದ್ದು, ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮುಹಮ್ಮದ್ ನಝೀರ್, ಕಳೆದ ಹಲವು ಸಮಯಗಳಿಂದ ಅನಧಿಕೃತ ಗೂಡಂಗಡಿಗಳು ಹಾಗೂ ಬೀದಿಬದಿ ವ್ಯಾಪಾರವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಟೈಗರ್ ಕಾರ್ಯಾಚರಣೆ ತಂಡ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದಕ್ಕಾಗಿ ಮತ್ತೆ ತಂಡ ರಚಿಸಿ ಸುತ್ತೋಲೆ ಹೊರಡಿಸಲಾಗಿತ್ತಾದರೂ, ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿಲ್ಲ. ಇದೀಗ ನಾಳೆಯಿಂದಲೇ ಟೈಗರ್ ಕಾರ್ಯಾಚರಣೆ ನಗರದಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದರು.

ಸದಸ್ಯ ಡಿ.ಕೆ.ಅಶೋಕ್ ಮಾತನಾಡಿ, ಕಾಟಾಚಾರದಂತೆ ತೆರವು ಕಾರ್ಯ ನಡೆಯಬಾರದು. ಕಾರ್ಯಾಚರಣೆ ಬಳಿಕ ಮತ್ತೆ, ಅಲ್ಲಿಯೇ ವ್ಯಾಪಾರ ಮುಂದುವರಿಸುವ ಸ್ಥಿತಿ ಎದುರಾಗಬಾರದು. ಇದಕ್ಕಾಗಿ ಸಮರ್ಪಕ ರೀತಿಯಲ್ಲಿ ಕಾರ್ಯಾಚರಣೆ ಆಗಬೇಕು. ಜೆಸಿಬಿ, ಪೊಲೀಸ್ ಭದ್ರತೆ ಹಾಗೂ ಎಲ್ಲಾ ಅಧಿಕಾರಿಗಳನ್ನು ಜತೆಯಾಗಿ ಇರಿಸಿಕೊಂಡು ಕಾರ್ಯಾಚರಣೆ ನಡೆಯಬೇಕು ಎಂದು ಹೇಳಿದರು.

ಮೇಯರ್ ಮಾತನಾಡಿ, ಈಗಾಗಲೇ ಮಂಗಳೂರಿನ ಸುಮಾರು 200ರಷ್ಟು ಬೀದಿ ಬದಿ ವ್ಯಾಪಾರಸ್ತರಿಗೆ ನಿಯಮ ಪ್ರಕಾರವಾಗಿ ವ್ಯಾಪಾರ ನಡೆಸಲು ಅನುಕೂಲವಾಗಲು ಗುರುತಿನ ಚೀಟಿ ನೀಡಲಾಗಿದೆ. ಈ ಬಗ್ಗೆ ಅವರ ಜತೆಗೆ ಸಭೆ ಕೂಡ ನಡೆಸಲಾಗಿದೆ. ಮುಂದೆ ಉಳಿದವರಿಗೆ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News