ವ್ಯಾಪಾರ ಪರವಾನಿಗೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ!

Update: 2016-08-30 15:36 GMT

ಮಂಗಳೂರು, ಆ.30: ವ್ಯಾಪಾರ ಉದ್ದಿಮೆ ಪರವಾನಿಗೆ ಪಡೆಯದೆ ಮಂಗಳೂರಿನಲ್ಲಿ ಉದ್ದಿಮೆ ನಡೆಸುತ್ತಿರುವ ಕುರಿತಂತೆ ಈಗಾಗಲೇ ಐದು ಬಾರಿ ದಾಳಿ ನಡೆಸಿ ಹಲವು ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ತಿಳಿಸಿದರು.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಸದಸ್ಯ ವಿಜಯ್ ಕುಮಾರ್ ಶೆಟ್ಟಿ ಸಭೆಯಲ್ಲಿ ಮಾತನಾಡುತ್ತಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಪರವಾನಿಗೆ ಪಡೆಯದ ಅಂಗಡಿ ಮಳಿಗೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದು ಸ್ವಾಗತಾರ್ಹ. ಅದೇ ರೀತಿ, ನಗರದ ಪ್ರತಿಷ್ಠಿತ ಮಾಲ್ ಪಾರ್ಕಿಂಗ್ ಹೆಸರಿನಲ್ಲಿ ವಾಹನ ಮಾಲಕರಿಂದ ಹಣ ಸಂಗ್ರಹ ಮಾಡುತ್ತಿದೆ. ಇದರ ವಿರುದ್ಧ ಯಾಕೆ ಕ್ರಮವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಬೋರ್‌ವೆಲ್ ನಿರ್ವಹಣೆಯಾಗುತ್ತಿಲ್ಲ!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ 53 ಹೊಸ ಕೊಳವೆ ಬಾವಿ (ಬೋರ್‌ವೆಲ್)ಗಳನ್ನು ಕೊರೆಯಲಾಗಿದೆ. ಆದರಲ್ಲಿ 43ರಲ್ಲಿ ಮಾತ್ರವೇ ನೀರು ಸಿಕ್ಕಿದೆ. ಒಟ್ಟು ನಗರದಲ್ಲಿ 174 ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿರುವುದಾಗಿ ನಾನು ಎರಡು ವಾರಗಳ ಹಿಂದೆ ಕೇಳಲಾದ ಚುಕ್ಕಿ ಪ್ರಶ್ನೆಗೆ ಅಧಿಕಾರಿಗಳಿಂದ ಉತ್ತರ ದೊರಕಿದೆ. ಆದರೆ, 2011ರಿಂದ ಈ ಬೋರ್‌ವೆಲ್‌ಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿಲ್ಲ. ಇಂತಹ ವ್ಯವಸ್ಥೆಯಡಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವುದು ಹೇಗೆ ಎಂದು ಸದಸ್ಯ ವಿನಯರಾಜ್ ಆಕ್ಷೇಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ ಲಿಂಗೇಗೌಡ, ಈ ಬಗ್ಗೆ ಈಗಷ್ಟೇ ಅರಿವಿಗೆ ಬಂದಿದೆ. ಒಂದು ವಾರದೊಳಗೆ ಮರು ಟೆಂಡರ್‌ಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು. 

ಕಾಂಕ್ರೀಟ್ ರಸ್ತೆಯ ಮಧ್ಯೆ ಸ್ಲ್ಯಾಬ್‌ಗಳು ಎದ್ದು, ದ್ವಿಚಕ್ರ ಸವಾರರಿಗೆ ಪ್ರಯಾಣ ಕಷ್ಟವಾಗಿದೆ. ಹಲವು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿರುವ ಉದಾಹರಣೆಗಳು ನಡೆದಿವೆ. ಜತೆಗೆ ನಗರದಲ್ಲಿ ಹಲವು ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಮೇರೆ ಮೀರಿದೆ ಎಂಬ ವಿನಯರ್‌ರಾಜ್‌ರವರ ಪ್ರಶ್ನೆಗೆ, ನಗರದ ಸಂಚಾರ ದಟ್ಟಣೆ ಸುಧಾರಿಸುವ ಸಲುವಾಗಿ ರಸ್ತೆ ಸುರಕ್ಷತಾ ಸಮಿತಿಯ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿ ಸಮಸ್ಯೆ ನಿವಾರಿಸುವುದಾಗಿ ಮೇಯರ್ ಹರಿನಾಥ್ ತಿಳಿಸಿದರು.

ಏಕ ನಿವೇಶನದ ಸಮಸ್ಯೆ ಬಗೆಹರಿಸುವ ಕುರಿತು ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತ ಮುಹಮ್ಮದ್ ನಝೀರ್, ಶೀಘ್ರದಲ್ಲಿ ನಗರಾಭಿವೃದ್ದಿ ಸಚಿವರ ಉಪಸ್ಥಿತಿಯಲ್ಲಿ ಸಭೆಯಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಕದ್ರಿ- ಕಂಕನಾಡಿಯಲ್ಲಿ ಆಕರ್ಷಕ ಮಾರುಕಟ್ಟೆ

ಕದ್ರಿ ಹಾಗೂ ಕಂಕನಾಡಿಯಲ್ಲಿ ಆಕರ್ಷಕ ಮಾರುಕಟ್ಟೆಗಳನ್ನು ನಿರ್ಧರಿಸಲಾಗಿದೆ. ಕದ್ರಿಯ 45 ಸೆಂಟ್ಸ್ ಜಾಗದಲ್ಲಿ 12.3 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವುದು ಹಾಗೂ ಕಂಕನಾಡಿಯ 147 ಸೆಂಟ್ಸ್ ಜಾಗದಲ್ಲಿ 41.5 ಕೋ.ರೂ. ವೆಚ್ಚದಲ್ಲಿ ಮಾರುಕಟ್ಟೆಗಳು ನಿರ್ಮಾಣವಾಗಲಿದೆ ಎಂದು ತಾಂತ್ರಿಕ ಸಲಹೆಗಾರ ಧರ್ಮರಾಜ್ ವಿವರಿಸಿದರು. ಮಾಲ್‌ಗಳನ್ನು ಮಾಡಿದ ರೀತಿಯಲ್ಲಿ ಮಾರುಕಟ್ಟೆಗಳನ್ನು ರಚಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂಬ ಆಕ್ಷೇಪ ಈ ಸಂದರ್ಭ ಸದಸ್ಯ ರಾಧಾಕೃಷ್ಣರವರಿಂದ ವ್ಯಕ್ತವಾಯಿತು.

ಮುಂದಿನ ಸಭೆಗೆ ರಾಜಕಾಲುವೆಗಳ ಮಾಹಿತಿ

ನಗರದಲ್ಲಿ ಎಷ್ಟು ರಾಜಕಾಲುವೆಗಳಿವೆ. ಎಲ್ಲೆಲ್ಲಾ ಒತ್ತುವರಿಯಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡುವಂತೆ ಸದಸ್ಯ ಅಶೋಕ್ ಶೆಟ್ಟಿ ಸಭೆಯಲ್ಲಿ ಆಗ್ರಹಿಸಿದರು. ಆದರೆ ಸದ್ಯ ಆ ಬಗ್ಗೆ ಮಾಹಿತಿ ಇಲ್ಲವಾಗಿದ್ದು, ಮುಂದಿನ ಸಭೆಯಲ್ಲಿ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಸ್ವಚ್ಛ ವಾರ್ಡ್‌ಗೆ 25 ಲಕ್ಷ ರೂ. ಪ್ರಥಮ ಬಹುಮಾನ!

ಸ್ವಚ್ಛ ಸರ್ವೆಕ್ಷಣಾ ತಂಡವು ಮಂಗಳೂರನ್ನು ಸ್ವಚ್ಛ ನಗರ ಎಂದು ಘೋಷಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಮಂಗಳೂರನ್ನು ಸ್ವಚ್ಛ ನಗರ ಎಂಬುದಾಗಿ ಮಾಡಬೇಕಾಗಿದೆ. ಪ್ರತೀ ವಾರ್ಡ್‌ಗಳು ಇದಕ್ಕಾಗಿ ಸಿದ್ದವಾಗಬೇಕು. ಸ್ಪರ್ಧಾತ್ಮಕ ರೀತಿಯಲ್ಲಿ ಸದಸ್ಯರೆಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ವಚ್ಛ ವಾರ್ಡ್‌ಗೆ ಪ್ರಥಮ ಬಹುಮಾನವಾಗಿ 25 ಲಕ್ಷ ರೂ. ಘೋಷಿಸಲಾಗುತ್ತಿದೆ ಎಂದು ಮೇಯರ್ ಹರಿನಾಥ್ ಸಭೆಯಲ್ಲಿ ತಿಳಿಸಿದರು.

ಸದಸ್ಯ ದಯಾನಂದ ಶೆಟ್ಟಿ ಆಕ್ಷೇಪಿಸುತ್ತಾ, ಗ್ರಾಮಾಂತರ ಪ್ರದೇಶದಲ್ಲಿರುವ ವಾರ್ಡ್‌ಗಳನ್ನು ನಗರದ ವಾರ್ಡ್‌ಗಳ ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ತನ್ನ ವಿರೋಧವಿದೆ ಎಂದರು. ನಗರ ಹಾಗೂ ಗ್ರಾಮಾಂತರ ವಾರ್ಡ್‌ಗಳು ವಿಭಿನ್ನವಾಗಿದೆ. ಭೌಗೋಳಿಕವಾಗಿ ಅದರ ಸ್ಥಿತಿಯಲ್ಲಿ ಭಿನ್ನತೆ ಇದೆ. ಸಿಟಿಯ ವಾರ್ಡ್‌ನಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವುದು ಸುಲಭವಾದರೆ, ಗ್ರಾಮಾಂತರ ಭಾಗದ ವಾರ್ಡ್‌ಗಳಲ್ಲಿ ಕಷ್ಟವಿದೆ. ಹೀಗಾಗಿ ಅದರಲ್ಲಿ ಪೈಪೋಟಿ ಬೇಡ ಎಂದಾಗ, ಗ್ರಾಮಾಂತರ ಭಾಗದ ಕೆಲವು ಕಾರ್ಪೊರೇಟರ್‌ಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News