×
Ad

ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರಿಗೆ ನಿರ್ಮಿಸಲಾದ ವಸತಿ ಸಮುಚ್ಚಯದ ಉದ್ಘಾಟನೆ

Update: 2016-08-30 21:49 IST

ಮಂಗಳೂರು, ಆ.30: ಮಂಗಳೂರಿನ ಪಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಮನೆಗಳನ್ನು ಒದಗಿಸುವ ಸಲುವಾಗಿ ವೆಲೆನ್ಸಿಯ ಮುಖ್ಯ ರಸ್ತೆಯ ಬಳಿ ನಿರ್ಮಿಸಲಾದ 7 ಮಹಡಿಗಳ ವಸತಿ ಸಮುಚ್ಚಯವನ್ನು ಮಂಗಳೂರು ಧರ್ಮಪ್ರಾಂತದ ಧರ್ಮಧ್ಯಕ್ಷ ಅತಿ.ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಸೂರು ಅತೀ ಅಗತ್ಯ. ಇದನ್ನು ಮನಗೊಂಡು ಫಾದರ್ ಮುಲ್ಲರ್ ಆಸ್ಪತ್ರೆಯು ತನ್ನಲ್ಲಿ ಶ್ರಮಿಸುತ್ತಿರುವ ಸುಮಾರು 38 ವೈದ್ಯರಿಗೆ ಸಬ್ಸಿಡಿ ದರದಲ್ಲಿ ಈ ವಸತಿ ಗೃಹಗಳನ್ನು ನಿರ್ಮಿಸಿ ಕೊಟ್ಟಿರುವ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ರೆಡಾಯ್ ಅಧ್ಯಕ್ಷ ಧರ್ಮೆಂದ್ರ ಬಿ. ಮೆಹ್ತಾ ಮಾತನಾಡಿ, ಫಾದರ್ ಮುಲ್ಲರ್ ಆಸ್ಪತ್ರೆಯು ಬಡವರ ಬಗ್ಗೆ ವಹಿಸುವ ಕಾಳಜಿ ವಿಶೇಷ. ಹಲವರು ಕೋಟಿ ರೂಪಾಯಿಗಳ ಉಚಿತ ವೈದ್ಯಕೀಯ ಸೇವೆಯನ್ನು ಆಸ್ಪತ್ರೆ ಬಡವರಿಗೆ ನೀಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ವೆಲೆನ್ಸಿಯಾ ಚರ್ಚ್‌ನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡಿಸೋಜ, ಫಾದರ್ ಮುಲ್ಲರ್ ತುಂಬೆ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ, ರೆ.ಫಾ.ಫೆಲಿಕ್ಸ್ ಮೊಂತೆರೊ, ರೆ.ಫಾ.ಮೆಲ್ವಿನ್, ರೆ.ಫಾ. ಜೋರ್ಜ್, ರೆ.ಫಾ. ಸಿಲ್ವೆಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ರೆ.ಫಾ.ಪ್ಯಾಟ್ರಿಕ್‌ರೊಡ್ರಿಗಸ್ ಸ್ವಾಗತಿಸಿದರು. ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ರುಡಾಲ್ಫ್ ಡೇಸಾ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರ ವಿವರಗಳನ್ನು ನೀಡಿದರು. ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ರಿಚರ್ಡ್ ಕುವೆಲ್ಲೊ ವಂದಿಸಿದರು. ಫಾದರ್ ಮುಲ್ಲರ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರೆ.ಫಾ.ಅಜಿತ್ ಮೆನೇಜಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News