ಸೆ.2ರಂದು ರಸ್ತೆಗಿಳಿಯುವುದಿಲ್ಲ ಆಟೊಗಳು

Update: 2016-08-30 16:40 GMT

ಮಂಗಳೂರು, ಆ. 30: ರಸ್ತೆ ಸಾರಿಗೆ ಸುರಕ್ಷತಾ ಮಸೂದೆ-2015ರ ವಿರುದ್ಧ, ರಿಕ್ಷಾ ಫ್ರೀ ಪರ್ಮಿಟ್ ಅವ್ಯವಹಾರವನ್ನು ಸಮಗ್ರ ತನಿಖೆಗೊಳಪಡಿಸಲು ಒತ್ತಾಯಿಸಿ ಹಾಗೂ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ, ದ.ಕ. ಜಿಲ್ಲೆಯ ವಿವಿಧ ಆಟೊರಿಕ್ಷಾ ಚಾಲಕರ ಸಂಘಟನೆಗಳು ಸೆಪ್ಟೆಂಬರ್ 2ರಂದು ದ.ಕ. ಜಿಲ್ಲೆಯಾದ್ಯಂತ ಆಟೋರಿಕ್ಷಾ ಬಂದ್‌ಗೆ ಕರೆ ನೀಡಿದೆ.

ಕಾರ್ಮಿಕ ರೋಧಿ ಕರಾಳ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು. ರಿಕ್ಷಾ ಫ್ರೀ ಪರ್ಮಿಟ್ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಅದನ್ನು ಸಮಗ್ರ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ಸಪ್ಟೆಂಬರ್ 2ರಂದು ರಾಷ್ಟ್ರಾದ್ಯಂತ ಜರಗಲಿರುವ ಅಖಿಲ ಭಾರತ ಸಾರಿಗೆ ಮುಷ್ಕರದಲ್ಲಿ ದ.ಕ. ಜಿಲ್ಲೆಯ ಆಟೋರಿಕ್ಷಾ ಚಾಲಕರು ಭಾಗವಹಿಸಲಿದ್ದಾರೆ.

ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸ್ವಪ್ರೇರಿತರಾಗಿ ಆಟೋರಿಕ್ಷಾ ಬಂದ್ ನಡೆಸುವ ಮೂಲಕ ಕಾರ್ಮಿಕ ವರ್ಗದ ಮಹಾಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರೂ, ಮುಖ್ಯ ಸಚೇತಕರಾದ ಐವನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಶೇಖರ ದೇರಳಕಟ್ಟೆ, ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಹೋರಾಟ ಸಮಿತಿಯ ಅಧ್ಯಕ್ಷ ಯಾದವ ಮರೋಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಬಲ್ಲಾಳ್‌ಬಾಗ್, ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್‌ ಯೂನಿಯನ್‌ನ ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಇರ್ಫಾನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News