ಜಾರ್ಖಂಡ್: ಹಿಂಸೆಗೆ ತಿರುಗಿದ ಪ್ರತಿಭಟನೆ
ರಾಮಗಡ(ಜಾರ್ಖಂಡ್),ಆ.30: ರಾಮಗಡ ಜಿಲ್ಲೆಯ ಗೋಲಾ ಬ್ಲಾಕ್‌ನಲ್ಲಿ ನಿನ್ನೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕವೊಂದು ಸ್ಥಳಾಂತರ ಸೌಲಭ್ಯಗಳನ್ನು ನೀಡದ್ದನ್ನು ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಪೊಲೀಸರು ಗೋಲಿಬಾರ್ ನಡೆಸಿದಾಗ ಇಬ್ಬರು ಕೊಲ್ಲಲ್ಪಟ್ಟಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಹಲವಾರು ಪೊಲೀಸರು ಸೇರಿದಂತೆ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ.
ಗ್ರಾಮಸ್ಥರು ಸೇನೆಗಡ ನದಿಯ ನೀರು ಪೂರೈಕೆ ವ್ಯವಸ್ಥೆ ಮತ್ತು ಸ್ಥಳದಲ್ಲಿದ್ದ ಜಿಲ್ಲಾಡಳಿತದ ಅಧಿಕಾರಿಗಳನ್ನು ಗುರಿ ಯಾಗಿಸಿಕೊಂಡು ದಾಳಿಗೆ ಮುಂದಾದಾಗ ಗೋಲಿಬಾರ್ ನಡೆಸುವುದು ಪೊಲೀ ಸರಿಗೆ ಅನಿವಾರ್ಯವಾಗಿತ್ತು. ಗುಂಡೇ ಟಿಗೆ ಓರ್ವ ಸಾವನ್ನಪ್ಪಿದ್ದರೆ, ಬಳಿಕ ಸಂಭವಿಸಿದ ನೂಕುನುಗ್ಗಲಿನಲ್ಲಿ ಓರ್ವ ಮೃತಪಟ್ಟು, ಕನಿಷ್ಠ 24 ಜನರು ಗಾಯ ಗೊಂಡಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಎಂ.ತಮಿಳ್‌ವಾಣನ್ ಸುದ್ದಿಗಾರರಿಗೆ ತಿಳಿಸಿದರು.
ಗೋಲಿಬಾರಿನ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ವಾಹನಗಳಿಗೆ ಬೆಂಕಿ ಹಚ್ಚಿದರಲ್ಲದೆ ರಾಂಚಿ-ಸಿಕಿದಿರಿ ಮತ್ತು ಗೋಲಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು. ನೀರು ಪೂರೈಕೆ ಸ್ಥಾವರದ ಜನರೇಟರೊಂದಕ್ಕೂ ಅವರು ಬೆಂಕಿ ಹಚ್ಚಿದರು.
ಮುಖ್ಯಮಂತ್ರಿ ರಘುವರ ದಾಸ್ ಅವರು ಗೋಲಿಬಾರ್ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.