ಮನುಷ್ಯ ಪರವಾಗಿ ಧ್ವನಿಯೆತ್ತಿರುವ ಭಾರತೀಯ ಲೇಖಕರು

Update: 2016-08-30 17:33 GMT

ಹೊಸದಿಲ್ಲಿ, ಅ.30: ರಾಷ್ಟ್ರದ ಪ್ರಜ್ಞೆಯಾಗುವುದು ಲೇಖಕನೊಬ್ಬನ ನಿಜವಾದ ಪಾತ್ರವೆಂದು ನಂಬಿರುವ ನ್ಯೂಝಿಲೆಂಡ್ ಸಂಜಾತ ಲೇಖಕ, ವಿ.ಟಿ.ಇಹಿಮೇರಾ, ಭಾರತೀಯ ಬರಹಗಾರರು ಮಾನವಕುಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸಾಹಿತ್ಯವನ್ನು ಉಪಯೋಗಿಸುವ ಮೂಲಕ ‘ಆದರ್ಶ ಮಾದರಿ’ ಯೊಂದನ್ನು ಸ್ಥಾಪಿಸಿದ್ದಾರೆಂದು ಗುಣಗಾನ ಮಾಡಿದ್ದಾರೆ.

ರಾಷ್ಟ್ರದ ಪ್ರಜ್ಞೆಯಾಗಿರುವುದೇ ಲೇಖಕನ ಪ್ರಮುಖ ಪಾತ್ರವೆಂಬುದು ತನ್ನ ಅನಿಸಿಕೆಯಾಗಿದೆ. ಭಾರತದ ಲೇಖಕರು ಅದನ್ನು ಮಾಡುತ್ತಿದ್ದಾರೆಂಬುದರಿಂದ ತಾನು ರೋಮಾಂಚಿತನಾಗಿದ್ದೇನೆ. ಅಮಿತಾವ್ ಘೋಷರಂತೆ ಅವರು ಹವಾಮಾನ ಬದಲಾವಣೆಯ ಕುರಿತು ಬರೆಯುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಇಹಿಮೇರಾ, ಇತ್ತೀಚೆಗೆ ಹವಾಮಾನ ಬದಲಾವಣೆಯ ಕುರಿತಾದ ಘೋಷರ ಹೊಸ ಕೃತಿ ‘ದಿ ಗ್ರೇಟ್ ಡಿರೇಜ್‌ಮೆಂಟ್’ನ ಪ್ರತಿಯೊಂದನ್ನು ಖರೀದಿಸಿದ್ದಾರೆ.
ಅವರು ಕಾಲ್ಪನಿಕವಲ್ಲದುದನ್ನು ಬರೆಯುತ್ತಾರೆ ಹಾಗೂ ನಾಯಕರಾಗುತ್ತಿದ್ದಾರೆ. ಭಾರತೀಯ ಜನರ ಪರವಾಗಿ ಕಾಳಜಿ-ಕಳವಳವನ್ನು ಹೊರ ಹಾಕುತ್ತಿದ್ದಾರೆ. ಅವರು ಸರಕಾರದ ಪಕ್ಕ ನಿಲ್ಲುವ ಹಾಗೂ ಅದರ ಪ್ರಜ್ಞೆಯಾಗುವ ಲೇಖಕನ ಮೂಲ ಪಾತ್ರವನ್ನು ವಹಿಸುತ್ತಿದ್ದಾರೆ. ಅರುಂಧತಿ ರಾಯ್, ಅಂತಹ ಇನ್ನೊಬ್ಬರು ಲೇಖಕಿಯಾಗಿದ್ದಾರೆಂದು ಇಹಿಮೇರಾ ಅಭಿಪ್ರಾಯಿಸಿದ್ದಾರೆ.
72ರ ಹರೆಯದ ಇಹಿಮೇರಾ, 1973ರಲ್ಲಿ ತನ್ನ ಚೊಚ್ಚಲ ಕೃತಿ ‘ಟಾಂಗಿ’ಯನ್ನು ಪ್ರಕಟಿಸುವುದರೊಂದಿಗೆ ಮೊದಲ ಮಾವೊರಿ ಬರಹಗಾರರೆನಿಸಿದ್ದಾರೆ. ಆ ಬಳಿಕ ಅವರು, ‘ಯೆಲ್ಲೊ ಬ್ರಿಕ್ ರೋಡ್’, ‘ಪೌನಾಮು’ ಹಾಗೂ ‘ದಿ ವ್ಹೇಲ್ ರೈಡರ್’ ಸಹಿತ 14 ಕಾದಂಬರಿಗಳು ಹಾಗೂ 7 ಸಣ್ಣಕತೆಗಳ ಸಂಗ್ರಹಗಳನ್ನು ಬರೆದಿದ್ದಾರೆ. ‘ದಿ ಯೆನ್ನೊ ರೈಡರ್’ ಅದೇ ಹೆಸರಿನಲ್ಲಿ ಚಲನಚಿತ್ರವಾಗಿದೆ.
ನ್ಯೂಝಿಲೆಂಡ್‌ನ ವಿದೇಶಾಂಗ ಸಚಿವಾಲಯದಲ್ಲಿ ರಾಜತಂತ್ರಜ್ಞರಾಗಿಯೂ ಕೆಲಸ ಮಾಡಿರುವ ಅವರು, ಸಾಹಿತ್ಯವನ್ನು ಕೇವಲ ಪರಿಸರ ನಾಶದ ಕುರಿತು ಗಮನ ಸೆಳೆಯುವುದಕ್ಕಾಗಿ ಮಾತ್ರ ಉಪಯೋಗಿಸದೆ ಲಿಂಗ ತಾರತಮ್ಯ, ವಲಸೆ ಇತ್ಯಾದಿ ಇತರ ಕಳವಳ ಬಗ್ಗೆಯೂ ಉಪಯೋಗಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News