ತುಂಬಿದ ಸಭೆಯಲ್ಲಿ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ದಲಿತ ಮಹಿಳೆಯರು

Update: 2016-08-30 17:35 GMT

ಮುಕ್ತಸರ್,ಆ.30: ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಮಂಗಳವಾರ ತನ್ನ ಸ್ವಕ್ಷೇತ್ರ, ಮುಕ್ತಸರ್ ಜಿಲ್ಲೆಯ ಲಾಂಬಿಯ ಮಂಡಿ ಕಿಲಿಯನ್‌ವಾಲಿಯಲ್ಲಿ ಆಯೋಜಿಸಲಾಗಿದ್ದ ದಲಿತ ಚೇತನಾ ರ್ಯಾಲಿಯಲ್ಲಿ ಅಭಿವೃದ್ಧಿ ಸಾಧನೆಯ ಬಗ್ಗೆ ಹೇಳಿಕೊಳ್ಳುತ್ತಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ದಲಿತ ಮಹಿಳೆಯರಿಬ್ಬರು ಅದನ್ನು ಪ್ರಶ್ನಿಸುವುದರೊಂದಿಗೆ ಭಾರೀ ಮುಖಭಂಗವನ್ನು ಅನುಭವಿಸಿದರು.

ಬಾದಲ್ ಅವರು ಎಸ್‌ಎಡಿ-ಬಿಜೆಪಿ ಸರಕಾರವು ದಲಿತರಿಗಾಗಿ ಆರಂಭಿಸಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ರಾಜ ರಾಣಿ ಮತ್ತು ಮಂಜಿತ್ ಕೌರ್ ಎಂಬ ದಲಿತ ಮಹಿಳೆಯರು ಪ್ರಶ್ನೆಗಳ ಸರಮಾಲೆಯನ್ನೇ ಆರಂಭಿಸಿದರು.
ಬಾದಲ್ ಮುಜುಗರಕ್ಕೊಳಗಾಗಿದ್ದನ್ನು ಗಮನಿಸಿದ ಪೊಲೀಸರು ಈ ಮಹಿಳೆಯರನ್ನು ಹೊರಕ್ಕೆ ಕರೆದೊಯ್ಯುವ ಮುನ್ನ ಒಬ್ಬಾಕೆ,ಈ ಯೋಜನೆಗಳ ಲಾಭವನ್ನೆಲ್ಲ ನಿಮ್ಮ ಅಧಿಕಾರಿಗಳು ಮತ್ತು ನಾಯಕರೇ ಕಬಳಿಸಿದ್ದಾರೆ. ಉದ್ದೇಶಿತ ಫಲಾನುಭವಿಗಳಿಗೆ ಏನೂ ಸಿಕ್ಕಿಲ್ಲ ಎಂದು ಹೇಳಿದಳು. ಈ ಘಟನೆಯಿಂದ ಭಾರೀ ಮುಖಭಂಗಕ್ಕೊಳಗಾದ ಬಾದಲ್ ತನ್ನ ಭಾಷಣವನ್ನು ಅಲ್ಲಿಗೇ ಮೊಟಕುಗೊಳಿಸಿ ಸ್ಥಳವನ್ನೇ ಖಾಲಿ ಮಾಡಿದರು.
ಇನ್ನೋರ್ವ ದಲಿತ ವ್ಯಕ್ತಿ, ಕೃಷ್ಣಾಪುರ ಪತ್ತಿ ಗ್ರಾಮದ ವೌರ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಪೊಲೀಸರು ತನಗೆ ಅವಕಾಶ ನಿರಾಕರಿಸಿದ ಬಳಿಕ ಸಭಾಸ್ಥಳದ ಹೊರಗೆ ಘೋಷಣೆಗಳನ್ನು ಕೂಗಿದ. ತನ್ನ ಮಗ ಜು.27ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಲ್ಲಿ ಗ್ರಾಮದ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ ಪೊಲೀಸರು ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದಾತ ದೂರಿಕೊಂಡ.
ಬಾದಲ್ ತನ್ನ ಭಾಷಣದಲ್ಲಿ ಪರಿಶಿಷ್ಟ ಜಾತಿಗಳನ್ನು ರಾಜ್ಯದ ಬೆನ್ನೆಲುಬು ಎಂದು ಬಣ್ಣಿಸಿದರಲ್ಲದೆ,ಅವರ ಸರ್ವಾಂಗೀಣ ಏಳಿಗೆಗಾಗಿ ರಾಜ್ಯ ಸರಕಾರವು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News