ಹಣವನ್ನು ಮರಳಿಸಿದ ಟ್ರಾಫಿಕ್ ಸಿಬ್ಬಂದಿಗೆ ಬಹುಮಾನ

Update: 2016-08-30 17:39 GMT

ಮಂಗಳೂರು, ಆ.30: ನಗರದ ಲಾಲ್‌ಬಾಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಸಿಬ್ಬಂದಿ ಸುರೇಶ್ ಕುಮಾರ್ ಎಂಬವರಿಗೆ ಲಾಲ್‌ಬಾಗ್ ವೃತ್ತದ ಬಳಿ ಸಿಕ್ಕಿದ್ದ 23,250 ರೂ. ಹಣದ ಕಟ್ಟನ್ನು ಇಂದು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಸಮ್ಮುಖದಲ್ಲಿ ಕಿಶನ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಮಿಷನರ್ ಅವರು ಸುರೇಶ್ ಕುಮಾರ್ ಅವರ ಪ್ರಾಮಾಣಿಕತೆಗೆ ಅವರಿಗೆ ಬಹುಮಾನ ನೀಡಿದರು.

ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಕಿಶನ್ ಸೋಮವಾರ ಬ್ಯಾಂಕ್‌ಗೆ ಡಿಪಾಸಿಟ್ ಮಾಡಲೆಂದು ತನ್ನ ದ್ವಿಚಕ್ರ ವಾಹನದಲ್ಲಿ ಹಣವನ್ನು ಕೊಂಡೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಅವರ ಹಣದ ಕಟ್ಟು ಲಾಲ್‌ಬಾಗ್ ವೃತ್ತದಲ್ಲಿ ಬಿದ್ದಿರುವುದು ತಿಳಿದಿರಲಿಲ್ಲ. ಹಣದ ಕಟ್ಟನ್ನು ಗಮನಿಸಿದ ಟ್ರಾಫಿಕ್ ಸಿಬ್ಬಂದಿ ಸುರೇಶ್ ಕುಮಾರ್ ಅದನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಹಣವನ್ನು ಹಸ್ತಾಂತರಿಸಿದ್ದರು. ಅಲ್ಲದೆ, ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿ ಹಣ ಕಳೆದುಕೊಂಡವರು ವಿವರಗಳೊಂದಿಗೆ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿತ್ತು.

ಪತ್ರಿಕೆಯಲ್ಲಿನ ಸುದ್ದಿಯನ್ನು ಓದಿದ ಕಿಶನ್ ಅವರು ನೇರವಾಗಿ ಪಶ್ಚಿಮ ಸಂಚಾರಿ ಠಾಣಾ ಇನ್‌ಸ್ಪೆಕ್ಟೆರ್‌ರನ್ನು ಭೇಟಿಯಾಗಿದ್ದು, ಅವರು ಹಣವನ್ನು ಕಮಿಷನರ್ ಕಚೇರಿಗೆ ತಂದು ಕಮಿಷನರ್ ಉಪಸ್ಥಿತಿಯಲ್ಲಿ ಕಿಶನ್‌ಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News