×
Ad

ಕ್ರೀಡೆಯಲ್ಲಿ ಸೋಲು-ಗೆಲುವು ಅನಿವಾರ್ಯ: ಸಚಿವ ಖಾದರ್

Update: 2016-08-30 23:49 IST

ಕೊಣಾಜೆ, ಆ.30: ಕ್ರೀಡೆಯು ನಿರ್ಣಾಯಕ ಹಂತ ತಲುಪಲು ಸೋಲು-ಗೆಲುವೆಂಬುದು ನಿಶ್ಚಿತವಾಗಿದ್ದು ಮಕ್ಕಳು ಇದಕ್ಕೆ ಎದೆಗುಂದದೆ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಲು ವಿದ್ಯಾರ್ಜನೆಯೊಂದಿಗೆ ಕ್ರೀಡೆಯಲ್ಲೂ ಅಪ್ರತಿಮ ಸಾಧನೆ ಮೆರೆದಲ್ಲಿ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬಹುದೆಂದು ಆಹಾರ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಅವರು ನರಿಂಗಾನ ಗ್ರಾಮದ ಕಲ್ಲರಕೋಡಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಂಚಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮನ್ನು ಉತ್ತಮವಾಗಿ ಕಲಿಕೆಯಲ್ಲಿ ತೊಡಗಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕೇವಲ ತಂದೆ-ತಾಯಿಯ ಆಸ್ತಿಯಾಗಿ ಉಳಿಯದೆ ದೇಶದ ಆಸ್ತಿಯಾಗಿ ರೂಪುಗೊಳ್ಳಬೇಕು. ಕಬಡ್ಡಿ ಕ್ರೀಡೆಯು ಮನುಷ್ಯನಿಗೆ ಬೇಕಾದ ದೈಹಿಕ ಕ್ಷಮತೆಯನ್ನು ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿ ವಿಷ್ಯದ ಉದಯೋನ್ಮುಖ ಕ್ರೀಡಾಪಟುಗಳಾಗಿ ಹೊರಹೊಮ್ಮಿರಿ ಎಂದು ಕರೆ ನೀಡಿದರು.

ಕುರ್ನಾಡು ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಕಲಿಕೆ ಮತ್ತು ಕ್ರೀಡೆಗೆ ಬೇಕಾದ ಪೂರಕ ವಾತಾವರಣ ನಿರ್ಮಿಸಿಕೊಟ್ಟಾಗ ಮಕ್ಕಳು ಸಾಧನೆಗೈಯಲು ಸಹಕಾರ ಸಿಕ್ಕಂತಾಗುತ್ತದೆ. ನಮ್ಮ ದೇಶದ ಹೆಮ್ಮೆಯ ಕುವರಿ ಸಿಂಧು ಒಲಂಪಿಕ್ಸ್‌ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದಿದ್ದು ಅಂಥಹ ಎಷ್ಟೋ ಸಿಂಧುಗಳು ಇಂತಹ ಕ್ರೀಡಾ ಸ್ಫರ್ಧೆಗಳಲ್ಲಿ ದೇಶಕ್ಕೆ ಲಭಿಸುವಂತಾಗಲಿ ಎಂದು ಹಾರೈಸಿದರು.

ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂ ಕೋಡಿ ಸಬಾಧ್ಯಕ್ಷತೆ ವಹಿಸಿದ್ದರು. ನರಿಂಗಾನ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದೀಕ್ ಪಾರೆ, ಪಂಚಾಯತ್ ಉಪಾಧ್ಯಕ್ಷೆ ನಳಿನಾಕ್ಷಿ, ಮಾಜಿ ಉಪಾಧ್ಯಕ್ಷ ಶೇಖಬ್ಬ, ಪಂ.ಸದಸ್ಯರಾದ ಅಬ್ದುಲ್ ಖಾದರ್, ಮುರಳೀಧರ ಮೋರ್ಲ, ಬೇಬಿ, ಜ್ಯೋತಿ ಡಿಸೋಜಾ, ಶಿಕ್ಷಕ ಸಂಘದ ಸದಸ್ಯರಾದ ರಾಮಕೃಷ್ಣ, ಶಶಿ,ಶಾಲಾ ಮೇಲಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುರ್ರಝಾಕ್, ಕುರ್ನಾಡು ಪ್ರೌಢಶಾಲಾ ದೈಹಿಕ ಶಿಕ್ಷಕ ವಿಠ್ಠಲ್ ಮಾಸ್ತರ್, ಕಲ್ಲರಕೋಡಿ ಶಾಲಾ ಮುಖ್ಯೋಪಾಧ್ಯಾಯಿನಿ ಶೀಲಾವತಿ, ಶಿಕ್ಷಕರಾದ ಸೀಮಾ ಮರಿಯ ಡಿಸೋಜಾ, ವಸಂತ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News