ನವೆಂಬರ್ 18ರಿಂದ 20ರವರೆಗೆ ‘ಆಳ್ವಾಸ್ ನುಡಿಸಿರಿ’

Update: 2016-08-31 08:02 GMT

ಮೂಡುಬಿದಿರೆ, ಆ.31: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ಈ ಬಾರಿ ನ.18, 19 ಮತ್ತು 20ರಂದು ಮೂರು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಅವರು ಬುಧವಾರದಂದು ತನ್ನ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

"ಕರ್ನಾಟಕ-ನಾಳೆಗಳ ನಿರ್ಮಾಣ" ಎಂಬ ಪರಿಕಲ್ಪನೆಯೊಂದಿಗೆ ನಡೆಯುವ 13ನೆ ವರ್ಷದ ಈ ನುಡಿಸಿರಿಯಲ್ಲಿ ಅತ್ಯುತ್ತಮ ವಿಚಾರಗೋಷ್ಠಿಗಳು, ಕವಿ ಸಮಯ-ಕವಿ ನಮನ ಸೇರಿದಂತೆ ಈ ಬಾರಿ "ನನ್ನ ಕಥೆ-ನಿಮ್ಮ ಜೊತೆ" ಎಂಬ ಹೊಸ ಶೀರ್ಷಿಕೆಯೊಂದಿಗೆ ಕಲಾವಿದರ ಜೀವನ ಚರಿತ್ರೆ ಪರಿಚಯವಾಗಲಿದೆ ಎಂದು ತಿಳಿಸಿದರು.

ನ.18ರಂದು ಬೆಳಗ್ಗೆ ನುಡಿಸಿರಿ ಸಮ್ಮೇಳನವು ಉದ್ಘಾಟನೆಗೊಳ್ಳಲಿದ್ದು, 20ರಂದು ಸಂಪನ್ನಗೊಳ್ಳಲಿದೆ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿದ್ದು, ಕನ್ನಡ ನಾಡು-ನುಡಿ-ಸಂಸ್ಕೃತಿಯ ಕುರಿತು ಕಾಳಜಿ ಇರುವ ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ "ಆಳ್ವಾಸ್ ನುಡಿಸಿರಿ 2016"ನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.

ನುಡಿಸಿರಿಗೆ ಪ್ರತಿನಿಧಿಯಾಗಲು ರೂ.100ನ್ನು ಪಾವತಿಸಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿರುತ್ತದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 08258-261229ನ್ನು ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಪತಿ ಕಿನ್ನಿಕಂಬಳ ಮತ್ತು ನುಡಿಸಿರಿ ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳಾದ ವೇಣು ಗೋಪಾಲ ಶೆಟ್ಟಿ, ಡಾ.ಪದ್ಮನಾಭ ಶೆಣೈ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News