ಹೆರಿಗೆಯಾಗಿ ಮೂರೇ ವಾರಗಳಲ್ಲಿ ಕರ್ತವ್ಯಕ್ಕೆ ಹಾಜರಾದ ದುಬೈ ಸಚಿವೆ!
ಮಗುವಿಗೆ ಜನ್ಮ ನೀಡಿದ ಕೆಲವೇ ವಾರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಮಹಿಳಾ ಸಚಿವೆಯನ್ನು ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಕ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಪ್ರಶಂಸಿಸಿದ್ದಾರೆ.
ಯುಎಇಯ ಸಾರ್ವಜನಿಕ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಒಂದು ಸಮಾಧಾನಕರ ಹೊಸ ಯೋಜನೆಯ ಪರಿಶೀಲನೆಗಾಗಿ ಶಿಕ್ಷಣ ಸಚಿವಾಲಯದ ಕೇಂದ್ರ ಕಚೇರಿಗೆ ಶೇಕ್ ಮುಹಮ್ಮದ್ ಭೇಟಿ ನೀಡಿದಾಗ ಶಿಕ್ಷಣ ಸಚಿವರಾದ ಹುಸೈನ್ ಬಿನ್ ಇಬ್ರಾಹಿಂ ಅಲ್ ಹಮ್ಮದಿ ಮತ್ತು ಇತರ ಸಿಬ್ಬಂದಿಯಾದ ಸಾರ್ವಜನಿಕ ಶಿಕ್ಷಣದ ರಾಜ್ಯ ಸಚಿವೆ ಜಮೀಲಾ ಬಿಂತ್ ಸಲೇಮ್ ಅಲ್ ಮುಹೈರಿ ಮೊದಲಾದವರು ಅವರನ್ನು ಸ್ವಾಗತಿಸಿದ್ದರು. ಶೇಖ್ ಮೊಹಮ್ಮದ್ ಇನಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಹೇಳಿರುವ ಪ್ರಕಾರ ಅಲ್ ಮುಹೈರಿ ಮಗುವಿಗೆ ಜನ್ಮ ನೀಡಿದ ಮೂರೇ ವಾರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶೇಕ್ ಮುಹಮ್ಮದ್ ತಮ್ಮ ಭೇಟಿಯ ಸಂದರ್ಭ ಸಚಿವಾಲಯವನ್ನು ಪರಿಚಯಿಸುತ್ತಿದ್ದ ಮುಹೈರಿ ಅವರ ಫೋಟೊ ಕೂಡ ಹಂಚಿಕೊಂಡಿದ್ದು, ಅವರ ಕರ್ತವ್ಯ ನಿಷ್ಠೆಯನ್ನು ಹೊಗಳಿ ನವಜಾತ ಶಿಶುವಿಗೆ ಶುಭ ಕೋರಿದ್ದಾರೆ.
ಕಳೆದ ವಾರ ದುಬೈ ಪ್ರಧಾನಿ ಹಲವಾರು ಸರ್ಕಾರಿ ಇಲಾಖೆಗಳಿಗೆ ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ದುಬೈ ಪಾಲಿಕೆ, ದುಬೈ ಭೂ ಇಲಾಖೆ, ಆರ್ಥಿಕ ಅಭಿವೃದ್ಧಿ ಇಲಾಖೆ ಮತ್ತು ದುಬೈ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಚ್ಚರಿಯೆಂದರೆ ಶೇಕ್ ಮುಹಮ್ಮದರ ಈ ಅನಿರೀಕ್ಷಿತ ಇಲಾಖಾ ಭೇಟಿಯ ಸಂದರ್ಭ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಹಾಜರಿರಲಿಲ್ಲ. ಸಾಮಾಜಿಕ ತಾಣಗಳಲ್ಲಿ ಜನರು ಶೇಕ್ ಮುಹಮ್ಮದರ ಭೇಟಿಗಳನ್ನು ಪ್ರಶಂಸಿಸಿದ್ದಾರೆ. “ಹಿರಿಯ ಅಥವಾ ಕಿರಿಯ ಅಧಿಕಾರಿಗಳಿಗೆ ಇದು ಉತ್ತಮ ಸಂದೇಶ. ಸಮಯಕ್ಕೆ ಸರಿಯಾಗಿ ಅವರು ಕರ್ತವ್ಯಕ್ಕೆ ಹಾಜರಿರಬೇಕು” ಎಂದು ಸಾಮಾಜಿಕ ತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಸೋಮವಾರದಂದು ಶೇಕ್ ಮುಹಮ್ಮದ್ ಅವರು ಒಂಭತ್ತು ದುಬೈ ಪಾಲಿಕಾ ಅಧಿಕಾರಿಗಳು ನಿವೃತ್ತರಾಗಿ ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಆದೇಶಿಸಿದ್ದಾರೆ.
ಕೃಪೆ: khaleejtimes.com