ಒಲಿಂಪಿಕ್ ಕಂಚಿನಿಂದ ಬೆಳ್ಳಿಗೆ ಭಡ್ತಿ ಪಡೆದ ಯೋಗೇಶ್ವರ್ ಹೇಳಿದರು ಚಿನ್ನದಂಥಾ ಮಾತು..

Update: 2016-08-31 09:42 GMT

ದಿಲ್ಲಿ, ಆ.31: 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದು ಇತ್ತೀಚೆಗೆ ಬೆಳ್ಳಿ ಪದಕಕ್ಕೆ ಅನಿರೀಕ್ಷಿತವಾಗಿ ಭಡ್ತಿ ಪಡೆದಿದ್ದ ಭಾರತದ ಯೋಗೇಶ್ವರ್ ದತ್ತ್ ಇದೀಗ ತಮ್ಮ ವಿಭಿನ್ನ ನಿಲುವಿನ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದ ರಶ್ಯಾದ ಬೆಸಿಕ್ ಕುಡುಕೊವ್ ಬಳಿಕ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಾಗ ಕುಡುಕೊವ್ ಉದ್ದೀಪನ ಮದ್ದು ಸೇವಿಸಿದ್ದಾರೆಂಬ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದರಿಂದಾಗಿ ಅವರ ಬೆಳ್ಳಿ ಪದಕವು ಹಿಂಪಡೆದು ಕಂಚಿನ ಪದಕ ಪಡೆದಿದ್ದ ಯೋಗೇಶ್ವರ್‌ಗೆ ಬೆಳ್ಳಿ ಪದಕದ ಭಡ್ತಿ ನೀಡಲಾಗಿತ್ತು.
ಆದರೆ ಬುಧವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗೇಶ್ವರ್, ‘‘ಒಲಿಂಪಿಕ್ ಬೆಳ್ಳಿ ಪದಕ ಕುಡುಕೊವ್ ಅವರ ಕುಟುಂಬದ ಬಳಿಯೇ ಇರಲಿ ಎಂದು ನಾನು ಆಶಿಸುತ್ತೇನೆ’’.
‘‘ಆ ಕುಟುಂಬದ ಬಗ್ಗೆ ಅನುಕಂಪ ವ್ಯಕ್ತಪಡಿಸುವುದು ನನಗೆ ಮುಖ್ಯವಾಗಿದೆ. ಕುಡುಕೊವ್ ಅವರು ಶ್ರೇಷ್ಠ ಕುಸ್ತಿಪಟುವಾಗಿದ್ದರು. ಅವರನ್ನು ಈಗಲೂ ನಾನು ಗೌರವಿಸುತ್ತೇನೆ’’ ಎಂದು ಹೇಳುವ ಮೂಲಕ ತಾನು ನಿಜವಾದ ಚಾಂಪಿಯನ್ ಎಂದು ಯೋಗೇಶ್ವರ್ ಸಾಬೀತುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News