‘ಅಗ್ರಾಳ ಪುರಂದರ ರೈ ನೂರರ ನೆನಪು’ ಕಾರ್ಯಕ್ರಮ

Update: 2016-08-31 13:12 GMT

ಮಂಗಳೂರು, ಆ.31:ಅಗ್ರಾಳ ಪುರಂದರ ರೈ ಅವರು ಅಪ್ಪಟ ಮಾನವತಿಯಾಗಿ ಬೆಳೆದಿದ್ದು, ಮನುಷ್ಯ ಹೇಗೆ ಬೆಳೆಯಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.

ಅವರು ಅಗ್ರಾಳ ಪುರಂದರ ರೈ ಅವರ ಕುಟುಂಬಸ್ಥರು , ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಅಗ್ರಾಳ ಪುರಂದರ ರೈ ನೂರರ ನೆನಪು ಕಾರ್ಯಕ್ರಮವನ್ನು ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ತಾನಿರುವ ಸ್ಥಳದಲ್ಲಿಯೆ ಹೊಸ ಬಗೆಯನ್ನು ಕಂಡುಕೊಳ್ಳುತ್ತಾ ಸುಂದರ ವಾತವರಣವನ್ನು ನಿರ್ಮಿಸಿದವರು ಅಗ್ರಾಳ ಪುರಂದರ ರೈ ಅವರು. ದೊಡ್ಡ ಸಾಹಿತಿಯಾಗದಿದ್ದರೂ ಬದುಕಿನಲ್ಲಿ ಸಾಹಿತ್ಯ ಕಟ್ಟಿದವರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರು ಪ್ರಸಕ್ತ ಕಾಲಘಟ್ಟದಲ್ಲಿ ಪ್ರಶ್ನಿಸುವ ಮನೋಭಾವನೆ ಕಡಿಮೆಯಾಗಿದ್ದು ಪ್ರಶ್ನೆಗಳು ಕಡಿಮೆಯಾಗಿದ್ದರಿಂದಲೆ ಅನೇಕ ಸಮಸ್ಯೆಗಳು ಸೃಷ್ಟಿಯಾಗಿದೆ. ಆದರೆ ಅಗ್ರಾಳ ಪುರಂದರ ರೈ ಅವರು ಪ್ರತಿಯೊಂದನ್ನು ಪ್ರಶ್ನಿಸುವ ಗುಣವನ್ನು ಹೊಂದಿದ್ದರು.ಪ್ರಶ್ನೆಯ ಮೂಲಕ ಧರ್ಮಶೃದ್ದೆ, ಧರ್ಮ ರಾಜಕೀಯ ಬೇರೆ ಬೇರೆಯೆಂದು ಅವರು ಹೇಳಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ಟ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಅಗ್ರಾಳ ಪುರಂದರ ರೈ ಅವರ ಬಗ್ಗೆ ನೆನಪುಗಳನ್ನು ಕಟ್ಟಿಕೊಟ್ಟರು.

ಕಾರ್ಯಕ್ರಮದಲ್ಲಿ ಅಗ್ರಾಳ ಪುರಂದರ ರೈ ಅವರ ಸಾಹಿತ್ಯ ಬದುಕು ಬಗ್ಗೆ ಹೊಸದಿಲ್ಲಿಯ ಜೆಎನ್‌ಯುವಿನ ಕನ್ನಡ ಭಾಷಾ ಪೀಠದ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು.

ಸಮಾರಂಭದಲ್ಲಿ ಅಗ್ರಾಳ ಪುರಂದರ ರೈ ಗ್ರಾಮೀಣ ಪತ್ರಕರ್ತ ಪ್ರಶಸ್ತಿಯನ್ನು ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಅಗ್ರಾಳ ಪುರಂದರ ರೈ ಅವರ ಮಕ್ಕಳಾದ ಜೀವನಲತಾ ರೈ, ಆಶಾಲತಾ ರೈ ಉಪಸ್ಥಿತರಿದ್ದರು.

ಬಿ.ಎ.ವಿವೇಕ ರೈ ಸ್ವಾಗತಿಸಿದರು, ಬಿ.ಎ.ಉಲ್ಲಾಸ ರೈ ವಂದಿಸಿದರು. ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News