ಬೆಳ್ತಂಗಡಿ: ಬಿಜೆಪಿಯಿಂದ ಮತ್ತೊಂದು ಗ್ರಾ.ಪಂ. ಸ್ಥಾನವನ್ನು ಕಸಿದುಕೊಂಡ ಕಾಂಗ್ರೆಸ್

Update: 2016-08-31 11:40 GMT

ಬೆಳ್ತಂಗಡಿ, ಆ.31: ತಾಲೂಕಿನ ನಾಲ್ಕು ಗ್ರಾಮ ಪಂಚಾಯತುಗಳ ನಾಲ್ಕು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ತಲಾ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಕಾಂಗ್ರೆಸ್ ಬಿಜೆಪಿ ಕೈಯಿಂದ ಒಂದು ಸ್ಥಾನವನ್ನು ಕಸಿದುಕೊಂಡಿದೆ.

ಧರ್ಮಸ್ಥಳ ಗ್ರಾ.ಪಂ.ನ ಕನ್ಯಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರೀಶ್ ಸುವರ್ಣ 387 ಮತಗಳನ್ನು ಗಳಿಸಿ ತಮ್ಮ ಸಮೀಪದ ಪ್ರತಿಸ್ಫರ್ಥಿ ಬಿಜೆಪಿಯ ರಾಜೇಶ್( 268) ಅವರನ್ನು 119 ಮತಗಳ ಅಂತರದಿಂದ ಸೋಲಿಸಿದ್ದಾರೆ. ಧರ್ಮಸ್ಥಳ ಗ್ರಾ.ಪಂ.ಅಧ್ಯಕ್ಷರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಅಚ್ಚುತ ಪೂಜಾರಿ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಕ್ಷೇತ್ರವನ್ನು ಕಾಂಗ್ರೆಸ್ ಬಿಜೆಪಿಯಿಂದ ಕಸಿದುಕೊಂಡಿದೆ. ತಿಂಗಳ ಹಿಂದೆ ನಡೆದ ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಅಡ್ಡಮತದಾನದಿಂದಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಇದೀಗ ಈ ವಾರ್ಡಿನ ಚುನಾವಣೆಯಲ್ಲಿಯೂ ಬಿಜೆಪಿಗೆ ಸೋಲಾಗಿರುವುದು ವಿಶೇಷ.

ಶಿಬಾಜೆ ಗ್ರಾ.ಪಂ.ನ ಎರಡನೆ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ರಮೇಶ್‌ಗೌಡ (477) ತಮ್ಮ ಸಮೀಪದ ಪ್ರತಿಸ್ಫರ್ಧಿ ಕಾಂಗ್ರೆಸ್ ಬೆಂಬಲಿತ ರಾಜು ಎಂ.ಕೆ. (318)ಅವರನ್ನು 159 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ ತನ್ನ ಬಳಿಯೇ ಉಳಿಸಿಕೊಂಡಿದೆ. ಇಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಆನಂದ ಗೌಡ ಅವರ ನಿಧನದಿಂದಾಗಿ ಸ್ಥಾನ ತೆರವಾಗಿತ್ತು.

ನಡ ಗ್ರಾಮ ಪಂಚಾಯತ್‌ನ ಒಂದನೆ ವಾರ್ಡಿನ ಅನುಸೂಚಿತ ಜಾತಿ ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರಾದ ಪೂರ್ಣಿಮಾ ಉಮೇಶ್( 531) ಮತಗಳನ್ನು ಗಳಿಸಿ ತಮ್ಮ ಸಮೀಪದ ಪ್ರತಿಸ್ಫರ್ಧಿ ಕಾಂಗ್ರೆಸ್ ಬೆಂಬಲಿತರಾದ ಲಲಿತಾ (353) ಅವರನ್ನು 178 ಮತಗಳ ಅಂತರದಿಂದ ಸೋಲಿಸಿದರು. ಈ ಸ್ಥಾನವನ್ನು ಬಿಜೆಪಿ ತನ್ನ ಬಳಿಯಲ್ಲಿಯೇ ಉಳಿಸಿಕೊಂಡಿದೆ. ಇಲ್ಲಿ ಗೆಲುವನ್ನು ಪಡೆದ ಪೂರ್ಣಿಮಾ ಅವರು ಅವಿರೋಧವಾಗಿ ಅಧ್ಯಕ್ಷರಾಗಲಿದ್ದಾರೆ. ಗ್ರಾ. ಪಂ. ಅಧ್ಯಕ್ಷರಾಗಿದ್ದ ಜಯಂತಿ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಇಲ್ಲಿ ಅಧ್ಯಕ್ಷಸ್ಥಾನ ಅನುಸೂಚಿತ ಜಾತಿ(ಮಹಿಳಾ) ಮೀಸಲಾತಿಯಿದ್ದು ಒಂದೇ ಸ್ಥಾನವಿದ್ದು ಇದರಿಂದಾಗಿ ಪೂರ್ಣಿಮಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಉಜಿರೆ ಗ್ರಾ.ಪಂ.ನ ಆರನೆ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಕಾಶ್ ವಿ.ಎಸ್. 389 ಮತಗಳನ್ನು ಗಳಿಸಿ ತಮ್ಮ ಸಮೀಪದ ಪ್ರತಿಸ್ಫರ್ಧಿ ಮಂಜುನಾಧ್ (384) ಮತಗಳು ಅವರನ್ನು ಕೇವಲ ಐದು ಮತಗಳ ಅಂತರದಿಂದ ಸೋಲಿಸಿದರು. ಸದಸ್ಯ ಕೂಸಪ್ಪ ಗೌಡ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಈ ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News