×
Ad

ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: 21 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Update: 2016-08-31 17:19 IST

ಉಡುಪಿ, ಆ.31: ಟೆಂಪೊ ರಿಕ್ಷಾದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಎಂಬ ಕಾರಣಕ್ಕೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೆಂಜೂರಿನ ಪ್ರವೀಣ್ ಪೂಜಾರಿ ಪ್ರಕರಣದ ಎಲ್ಲ 21 ಆರೋಪಿಗಳ ನ್ಯಾಯಾಂಗ ಬಂಧನವನ್ನು ಉಡುಪಿ ನ್ಯಾಯಾಲಯವು ಮತ್ತೆ 15 ದಿನಗಳ ಕಾಲ ವಿಸ್ತರಿಸಿ ಆದೇಶಿಸಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ 19 ಮತ್ತು ಪ್ರಚೋದನೆ ನೀಡಿದ ಇಬ್ಬರು ಆರೋಪಿಗಳನ್ನು ಹೆಬ್ರಿ ಪೊಲೀಸರು ಇಂದು ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶ ರಾಜೇಶ್ ಕರ್ಣಂ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆ.15ರವರೆಗೆ ವಿಸ್ತರಿಸಿ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಹಾಜರಿದ್ದರು. ಬಳಿಕ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಹಿರಿಯಡ್ಕ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಪ್ರಕರಣಕ್ಕೆ ಸಂಬಂಧಿಸಿ ಆ.18ರಂದು ಏಳು ಮಂದಿಯನ್ನು ಹಾಗೂ ಆ.19 ರಂದು 15 ಮಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇವರನ್ನು ಆ.31ರವರೆಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದಿಗೆ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೊಲೆ ಪ್ರಕರಣ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ನ್ಯಾಯಾಲಯದ ಆದೇಶದಂತೆ ಹೆಬ್ರಿ ಠಾಣೆಗೆ ವರ್ಗಾಯಿಸಲಾಗಿದೆ. ಇದೀಗ ಈ ಪ್ರಕರಣದ ತನಿಖಾಧಿಕಾರಿಯಾಗಿ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಾಮೀನು ಅರ್ಜಿ: ಈ ಪ್ರಕರಣದಲ್ಲಿ ಆರೋಪಿಗಳಿಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿರುವ ಹಿಂದು ಜಾಗರಣಾ ವೇದಿಕೆಯ ಮುಖಂಡ ಅರವಿಂದ ಕೋಟೇಶ್ವರ್ ಅವರ ಜಾಮೀನು ಅರ್ಜಿಯನ್ನು ವಕೀಲ ರವಿಕಿರಣ್ ಮುರ್ಡೇಶ್ವರ, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದಲ್ಲಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಲಾಗಿದೆ. ಉಳಿದ ಆರೋಪಿಗಳಿಗೆ ಜಾಮೀನು ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News