ವಿಪಕ್ಷ ಸದಸ್ಯರ ಸಭಾತ್ಯಾಗ: ಕೋರಂ ಕೊರತೆಯಿಂದ ಸಭೆ ಮೊಟಕು

Update: 2016-08-31 12:01 GMT

ಉಡುಪಿ, ಆ.31: ಉಡುಪಿ ನಗರಸಭೆಗೆ ಸೇರಿದ ವಿಶ್ವೇಶ್ವರಯ್ಯ ವಾಣಿಜ್ಯ ಕಟ್ಟಡದ ಅಭಿವೃದ್ಧಿ ಕುರಿತು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡದ ಬಗ್ಗೆ ಅಸಮಾಧಾನಗೊಂಡ ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದು, ಇದರಿಂದ ಕೋರಂ ಕೊರತೆ ಉಂಟಾಗಿ ಸಭೆಯನ್ನು ಅರ್ಧ ದಲ್ಲೇ ಕೊನೆಗೊಳಿಸಲಾಯಿತು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ವಿಪಕ್ಷ ನಾಯಕ ಡಾ.ಎಂ.ಆರ್. ಪೈ, ತನ್ನ ವಾರ್ಡ್ ವ್ಯಾಪ್ತಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ವಿಶ್ವೇಶ್ವರಯ್ಯ ವಾಣಿಜ್ಯ ಕಟ್ಟಡದ ಅಭಿವೃದ್ಧಿ ಕಾರ್ಯದ ಬಗ್ಗೆ ಆ ವಾರ್ಡಿನ ಸದಸ್ಯನಾಗಿರುವ ನನ್ನ ಗಮನಕ್ಕೆ ಈವರೆಗೆ ತಂದಿಲ್ಲ. ಇದೀಗ ಅಜೆಂಡಾದಲ್ಲಿ ಪ್ರಸ್ತಾಪಿಸಿರುವ ಈ ವಿಚಾರವನ್ನು ಇಂದಿನ ಸಭೆಯಲ್ಲಿ ಅನು ಮೋದನೆ ನೀಡಲು ಬಿಡುವುದಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇದು ಪ್ರಶ್ನೋತ್ತರ ವೇಳೆಯಾಗಿದ್ದು, ಮುಂದೆ ಅಜೆಂಡಾ ಚರ್ಚೆ ಮಾಡುವ ವೇಳೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು. ಈ ಬಗ್ಗೆ ಈಗಲೇ ಮಾಹಿತಿ ನೀಡಬೇಕು. ಇಲ್ಲದಿದ್ದರೆ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಸದಸ್ಯ ಯಶ್‌ಪಾಲ್ ಸುವರ್ಣ ಎಚ್ಚರಿಕೆ ನೀಡಿದರು. ಆದರೂ ಅಧ್ಯಕ್ಷರು ಮಾಹಿತಿ ನೀಡಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ವಿಪಕ್ಷ ಸದಸ್ಯರೆಲ್ಲರು ಸಭೆ ಯಿಂದ ನಿರ್ಗಮಿಸಿದರು.

ಸಭೆಯಲ್ಲಿ ಕೋರಂ ಕೊರತೆ

ಸಭೆಯಿಂದ ಹೊರ ನಡೆಯುವ ವೇಳೆ ವಿಪಕ್ಷ ನಾಯಕ ಎಂ.ಆರ್.ಪೈ ಸಭೆಯಲ್ಲಿ ಕೋರಂ ಕೊರತೆ ಉಂಟಾಗಿದ್ದು, ಇನ್ನು ಸಭೆ ನಡೆಸುವುದು ಹಾಗೂ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಕಾನೂನು ಬಾಹಿರವಾಗುತ್ತದೆ ಎಂದರು. ಈಗಲೇ ಮಾಹಿತಿ ನೀಡುತ್ತೇನೆ. ಆದರೆ ಸಭೆಯಿಂದ ನಿಗರ್ಮಿಸುವುದು ಬೇಡ ಎಂದು ಅಧ್ಯಕ್ಷರು ವಿಪಕ್ಷ ಸದಸ್ಯರಲ್ಲಿ ಮನವಿ ಮಾಡಿದರು. ಇದಕ್ಕೆ ಒಪ್ಪದ ಸದಸ್ಯರು ಅಲ್ಲಿಂದ ಹೊರನಡೆದರು. ಅಧ್ಯಕ್ಷರು ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು. ನಂತರ ಅಧ್ಯಕ್ಷರು ವಿಪಕ್ಷ ಅಧ್ಯಕ್ಷರ ಚೇಂಬರ್‌ಗೆ ತೆರಳಿ ಸಭೆಗೆ ಹಾಜರಾಗುವಂತೆ ವಿನಂತಿಸಿದರು. ಇದಕ್ಕೆ ವಿಪಕ್ಷ ಸದಸ್ಯರು ಒಪ್ಪದ ಕಾರಣ ಮತ್ತೆ ಸಭೆಗೆ ಮರಳಿದ ಅಧ್ಯಕ್ಷರು ಕೋರಂ ಕೊರತೆಯಿಂದ ಸಭೆಯನ್ನು ಅರ್ಧಕ್ಕೆ ಕೊನೆಗೊಳಿಸಿದರು.

ಸಭೆಯಲ್ಲಿ ಕೋರಂಗಾಗಿ 18 ಸದಸ್ಯರ ಹಾಜರಾತಿ ಇರಬೇಕು. ಇಂದಿನ ಸಭೆಯಲ್ಲಿ ವಿಪಕ್ಷ ಸದಸ್ಯರು ಸೇರಿದಂತೆ ಒಟ್ಟು 25ಕ್ಕೂ ಅಧಿಕ ಸದಸ್ಯರಿದ್ದರು. ಆದರೆ ಆಡಳಿತ ಪಕ್ಷದ ಬಹುತೇಕ ಸದಸ್ಯರು ಸಭೆಯಲ್ಲಿ ಗೈರುಹಾಜರಾಗಿದ್ದರು. ಇದರಿಂದ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ ಪರಿಣಾಮ ಸಭೆಯಲ್ಲಿ ಕೋರಂ ಕೊರತೆ ಉಂಟಾಯಿತು.

ಬಿಒಟಿ ಸಿಸ್ಟಮ್‌ನಲ್ಲಿ ಅಭಿವೃದ್ಧಿ

ಆಡಳಿತ ಪಕ್ಷದ ಸದಸ್ಯರ ಸೂಚನೆಯಂತೆ ಅಧ್ಯಕ್ಷರು ಹಾಗೂ ಪೌರಾಯುಕ್ತ ಡಿ.ಮಂಜುನಾಥಯ್ಯ ಬಳಿಕ ತಮ್ಮ ಕುರ್ಚಿಯಿಂದ ಕೆಳಗಿಳಿದು ಸದಸ್ಯರ ಕುರ್ಚಿಯಲ್ಲಿ ಕುಳಿತು ವಿಶ್ವೇಶ್ವರಯ್ಯ ವಾಣಿಜ್ಯ ಕಟ್ಟಡದ ಅಭಿವೃದ್ಧಿ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಈ ಕಟ್ಟಡವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್ ವ್ಯವಸ್ಥೆಯಲ್ಲಿ ನಿರ್ಮಿಸುವ ಕುರಿತು ಕಿರಣ್ ಕುಮಾರ್ ಅಧ್ಯಕ್ಷತೆ ಯಲ್ಲಿ 2010ರ ಅ.31ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಅನಂತರ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆ ದಿರಲಿಲ್ಲ. ಹಿಂದಿನ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಈ ಬಗ್ಗೆ ಸಭೆ ಕರೆದು ಚರ್ಚಿಸಿದ್ದರು. ಇದೀಗ ಈ ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಂಡವಿ ಬಿಲ್ಡರ್ಸ್‌ಗೆ ವಹಿಸಿಕೊಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.

61 ಸೆಂಟ್ಸ್ ಜಾಗದಲ್ಲಿ ಸುಮಾರು 12ಕೋಟಿ ರೂ. ವೆಚ್ಚದಲ್ಲಿ ಈ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದ್ದು, ಮೊದಲ ಒಂದು ಮತ್ತು ಎರಡನೆ ವರ್ಷವನ್ನು ನಿರ್ಮಾಣ ಹಂತ ಎಂದು ಪರಿಗಣಿಸಿ ಮೂರನೆ ವರ್ಷ ನಗರಸಭೆಗೆ 80.11ಲಕ್ಷ ರೂ. ನೀಡಲಾಗುತ್ತದೆ. ಮುಂದೆ ಪ್ರತಿವರ್ಷ ಶೇ.5 ರಷ್ಟು ಏರಿಕೆ ಮಾಡಿ, 30ವರ್ಷಗಳ ನಂತರ ಈ ಕಟ್ಟಡವು ನಗರಸಭೆಗೆ ಹಸ್ತಾಂತರಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ರಸ್ತೆ ದುರಸ್ತಿಗೆ ಆಗ್ರಹ

ಸಭೆಯ ಆರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ನಗರಸಭೆ ಸದಸ್ಯೆ, ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರನ್ನು ನಗರಸಭೆ ವತಿಯಿಂದ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಹೊಂಡದಿಂದ ಕೂಡಿದ್ದು, ಮುಂದೆ ನಡೆಯುವ ಗಣೇಶೋತ್ಸವ ಮೆರವಣಿಗೆಗೆ ತೀರಾ ತೊಂದರೆಯಾಗ ಲಿದೆ. ಆದುದರಿಂದ ತುರ್ತು ಕಾಮಗಾರಿಯನ್ನು ನಡೆಸುವಂತೆ ಸದಸ್ಯರಾದ ರಮೇಶ್ ಕಾಂಚನ್, ಯಶ್‌ಪಾಲ್ ಸುವರ್ಣ ಒತ್ತಾಯಿಸಿದರು. ಮಲ್ಪೆ, ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕೂಡ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಕೂಡಲೇ ದುರಸ್ತಿ ಮಾಡುವಂತೆ ಸಂಬಂಧ ಇಲಾಖೆಗೆ ಪತ್ರ ಬರೆಯಬೇಕು ಎಂದು ಅವರು ಸಭೆಯಲ್ಲಿ ಆಗ್ರಹಿಸಿದರು.

ಕಲ್ಮಾಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಳಚೆ ನೀರು ಶುದ್ದೀಕರಣ ಘಟಕವನ್ನು ಬೇರೆ ಕಡೆ ಸ್ಥಳಾಂತರಗೊಳಿಸಬೇಕು ಎಂದು ಸ್ಥಳೀಯ ಸದಸ್ಯ ನಾರಾಯಣ ಕುಂದರ್ ಸಭೆಯಲ್ಲಿ ಒತ್ತಾಯಿಸಿದರು. ಈಗಾಗಲೇ ಸಚಿವರ ಸೂಚನೆಯಂತೆ ಕಲ್ಮಾಡಿ ಪ್ರದೇಶವನ್ನು ಕೈಬಿಡಲಾಗಿದ್ದು, ಮುಂದೆ ಬೇರೆ ಸ್ಥಳ ವನ್ನು ಗುರುತಿಸಲಾಗುವುದು ಎಂದು ಪೌರಾಯುಕ್ತರು ಸಭೆಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News