ಅತ್ಯತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿಗೆ ಬೆಳ್ತಂಗಡಿಯ ಪ್ರಭಾಕರ ಹೆಗ್ಡೆ ಆಯ್ಕೆ
ಬೆಳ್ತಂಗಡಿ, ಆ.31: ಕಳೆದ ಎರಡುವರೆ ದಶಕಗಳಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಬಜಿರೆ ಹಟ್ಟಾಜೆ ನಿವಾಸಿ ಮಂಗಳತೇರು ಶಾಲೆಯ ಶಿಕ್ಷಕ ಪ್ರಭಾಕರ ಹೆಗ್ಡೆ ಅವರು 2015-16 ನೆ ಸಾಲಿನ ಅತ್ಯತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕರ ಕುಟುಂಬದಿಂದಲೇ ಬಂದಿರುವ ಪ್ರಭಾಕರ ಹೆಗ್ಡೆಯವರು 1991ರಲ್ಲಿ ಶಿಕ್ಷಕ ಸೇವೆಗೆ ಸೇರ್ಪಡೆಯಾದರು. 1999ರವರೆಗೆ ವೇಣೂರು ತಿಮ್ಮನಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 2000 ದಿಂದ 2007ರ ವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಕ್ಕಿಲು, 2007ರಿಂದ ವೇಣೂರಿನ ಮಂಗಳತೇರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ 2009-10ರಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2013-14ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಖಾಸಗಿ ಮನೆಯಲ್ಲಿ ಆರಂಭವಾದ ನೆಕ್ಕಿಲು ಶಾಲೆಗೆ ಸ್ಥಾಪಕ ಅಧ್ಯಾಪಕರಾಗಿ ಬಂದ ಇವರು ಗ್ರಾಮಸ್ಥರ ಸಹಕಾರದೊಂದಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿರುವ ಮಾದರಿ ಶಾಲೆಯಾಗಿ ರೂಪಿಸಿ ಆರು ವರ್ಷದಲ್ಲಿ ತಾಲೂಕಿನ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ದೊರಕುವಂತೆ ಮಾಡಿದ್ದರು. ತಾವು ಸೇವೆ ಸಲ್ಲಿಸಿದ್ದ ಎಲ್ಲ ಶಾಲೆಗಳಲ್ಲಿಯೂ ಆಕರ್ಷಕ ತೈಲ ಚಿತ್ರಗಳು ಉಬ್ಬುಚಿತ್ರಗಳನ್ನು ರಚಿಸಿದ್ದಾರೆ. ಶಿಶುಗೀತೆ, ಮಕ್ಕಳ ಕತೆ ರಚನೆಗಾರರಾಗಿದ್ದಾರೆ. ಇವರ ಕವನ ಸಂಕಲನವೂ ಬಿಡುಗಡೆಯಾಗಿದೆ.
ಕ್ರೀಡಾ ಪಟುವಾಗಿರುವ ಇವರು ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಇವರು ಆಕಾಶವಾಣಿಯಲ್ಲಿ ಆಗಾಗ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬರುವ ಮೊದಲು ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದರು. ವೇಣೂರು ಮಂಡಲ ಪಂಚಾಯತ್‌ನ ಉಪ ಪ್ರಧಾನರಾಗಿಯೂ ಕಾರ್ಯ ನಿರ್ವಹಿಸಿದ್ದರು.
ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಆಗ ಸರಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ನಡುವಿನ ಅಸಮಾನತೆ ಇಲ್ಲವಾಗುತ್ತದೆ. ಸರಕಾರಗಳು ಶಾಲಾಮಕ್ಕಳಿಗೆ ಉಚಿತ ಪುಸ್ತಕ, ಬಟ್ಟೆ, ಊಟ, ಹಾಲು ಹೀಗೆ ಎಲ್ಲವನ್ನೂ ನೀಡುತ್ತಿದೆ. ಇದು ಉತ್ತಮ ವಿಚಾರವಾಗಿದೆ. ಇದರೊಂದಿಗೆ ಶಾಲೆಗಳಿಗೆ ಸರಿಯಾಗಿ ಶಿಕ್ಷಕರನ್ನೂ ಒದಗಿಸುವ ಅಗತ್ಯವಿದೆ.
-ಪ್ರಭಾಕರ ಹೆಗ್ಡೆ