ಸ್ಕಾರ್ಫ್ ನಿಲ್ಲಿಸಲು ಕೇಸರಿ ಶಾಲು ಧರಿಸುತ್ತಿರುವ ವಿದ್ಯಾರ್ಥಿಗಳು

Update: 2016-08-31 13:23 GMT

ಸುಳ್ಯ, ಆ.31: ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಕೆಲವು ಹಿಂದೂ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿ ಬರುತ್ತಿರುವ ಘಟನೆ ಪೆರುವಾಜೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ವರದಿಯಾಗಿದೆ.

ಈ ಕಾಲೇಜಿನಲ್ಲಿ ಕಲಿಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದಿನಿಂದಲೇ ಸಮವಸ್ತ್ರ ಧರಿಸುವುದರ ಜತೆ ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳುತ್ತಿದ್ದರು. ಇತ್ತಿಚೆಗೆ ಇದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳಲ್ಲಿ ಕೆಲವರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ, ಇದಕ್ಕೆ ಅವಕಾಶ ಮಾಡಿಕೊಡಬಾರದೆಂದೂ ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದ್ದರು. ಮರುದಿನದಿಂದ ಇದರಲ್ಲಿ ಕೆಲವರು ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಹಾಜರಾಗತೊಡಗಿದರು.

ಪ್ರಾಂಶುಪಾಲರು ಇವರನ್ನು ಕರೆಸಿ, ‘ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದು ಹಿಂದಿನಿಂದಲೇ ಇತ್ತು. ಈಗ ನೀವು ಈ ರೀತಿ ಮಾಡುವುದು ಸರಿಯಲ್ಲ’ ಎಂದು ಹೇಳಿದರೂ ಒಪ್ಪದ ಈ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಹಾಜರಾಗುತ್ತಿದ್ದು, ಇನ್ನಿತರ ಕೆಲ ವಿದ್ಯಾರ್ಥಿಗಳೂ ಇದೇ ರೀತಿ ಶಾಲು ಹಾಕಿ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದು, ಪೋಷಕರ ಸಭೆ ಕರೆದು ವಿವಾದ ಇತ್ಯರ್ಥಗೊಳ್ಳುವ ಭರವಸೆ ಇದೆ ಎಂದು ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News