ಅಡ್ಯಾರ್‌ನಲ್ಲಿ ಒಡೆದ ನೀರು ಸರಬರಾಜು ಪೈಪ್: ಗುರುವಾರ ಮಧ್ಯಾಹ್ನ ವೇಳೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಭರವಸೆ

Update: 2016-08-31 13:30 GMT

ಮಂಗಳೂರು, ಆ.31: ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜು ಮಾಡುವ ಕೊಳವೆ ಒಡೆದು ಹೋಗಿದ್ದು ಇದರ ದುರಸ್ತಿ ಕಾರ್ಯ ಗುರುವಾರ ಮಧ್ಯಾಹ್ನಕ್ಕೆ ಪೂರ್ಣಗೊಳ್ಳಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಎಂ. ಹರಿನಾಥ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ತುಂಬೆಯಿಂದ ಡ್ಯಾಂನಿಂದ ಮಂಗಳೂರು ನಗರಕ್ಕೆ ಪೂರೈಸುವ ಪೈಪ್‌ಲೈನ್ ಮಂಗಳವಾರ ರಾತ್ರಿ ಅಡ್ಯಾರ್‌ನಲ್ಲಿ ಒಡೆದು ಹೋಗಿದೆ.ತುಂಬೆಯಿಂದ ನೀರು ಪೂರೈಸುವ ಎರಡು ಪೈಪ್‌ಗಳಲ್ಲಿ ಒಂದು ಕೊಳವೆ ಅಡ್ಯಾರ್ ಬಳಿ ಒಡೆದು ಹೋಗಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಬುಧವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಗರದ ಶೇಕಡ 60ರಷ್ಟು ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ತೊಂದರೆಯಾಗಿದೆ.

ಇದೇ ಪ್ರದೇಶದಲ್ಲಿ ಕಳೆದ ವರ್ಷ ನೀರು ಸರಬರಾಜಿನ ಕೊಳವೆ ಒಡೆದ ಪರಿಣಾಮ ಐದು ದಿನಗಳ ಕಾಲ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಮಳೆಗಾಲದಲ್ಲೂ ನಗರಕ್ಕೆ ಮತ್ತೆ ನೀರಿನ ಸಮಸ್ಯೆ ಎದುರಾಗಿದೆ.

ಅಡ್ಯಾರ್‌ನಲ್ಲಿ ಬುಧವಾರ ಮುಂಜಾನೆಯಿಂದಲೆ ದುರಸ್ತಿ ಕಾರ್ಯ ನಡೆಯುತ್ತಿದ್ದು ಗುರುವಾರ ಮಧ್ಯಾಹ್ನದ ನಂತರ ನೀರು ಸರಬರಾಜು ಮಾಡಲಾಗುವುದೆಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News