ಪುಂಜಾಲಕಟ್ಟೆ:ಸಂಬಂಧಿಕನಿಂದಲೇ ದಲಿತ ಬಾಲಕಿಯ ಅತ್ಯಾಚಾರ
ಬಂಟ್ವಾಳ, ಆ. 31: ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸಿನ ದಲಿತ ಬಾಲಕಿಯೊಬ್ಬಳನ್ನು ಸಂಬಂಧಿಕ ಯುವಕ ಸೇರಿ ಇಬ್ಬರು ಅತ್ಯಾಚಾರಗೈದಿರುವ ಘಟನೆ ನಡೆದಿದೆ.
ಇಲ್ಲಿನ 17ರ ಹರೆಯದ ಬಾಲಕಿಯನ್ನು ಸಂಬಂಧಿಕ ಯುವಕ ಸಂಜೀವ ಮತ್ತು ಆತನ ಸ್ನೇಹಿತ ಸಂಜೀತ್ ಎಂಬವರು ಆಟೊರಿಕ್ಷಾದಲ್ಲಿ ಪಕ್ಕದ ನಿರ್ಜನ ಪ್ರದೇಶದ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಬಾಲಕಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಆಟೊರಿಕ್ಷಾದಲ್ಲಿ ಆಕೆಯನ್ನು ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ಅತ್ಯಾಚಾರಗೈದು ರಾತ್ರಿಯ ವೇಳೆ ಮನೆಗೆ ವಾಪಸ್ ತಂದು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಆಕೆ ಮನೆಗೆ ಬರುವಾಗ ರಾತ್ರಿಯಾದ ಕಾರಣ ಹೆತ್ತವರು ವಿಚಾರಿಸಿದಾಗ ಆಕೆ ಆತ್ಯಾಚಾರ ನಡೆದ ಘಟನೆಯನ್ನು ತಿಳಿಸಿದ್ದಾಳೆ ಎನ್ನಲಾಗಿದೆ.
ಅದರಂತೆ ಬುಧವಾರ ಹೆತ್ತವರು ನೀಡಿರುವ ದೂರಿನಂತೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಸೈ ರಾಮ ನಾಯಕ್ ಆರೋಪಿಗಳಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಹೆಚ್ಚುವರಿ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ರವೀಶ್, ಸಿಐ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.