ದ.ಕ. ಜಿ.ಪಂ.ನ ಎಲ್ಲಾ ಕ್ಷೇತ್ರಗಳಿಗೆ ಲಭಿಸಲಿದೆ ತಲಾ 4 ಲಕ್ಷ ರೂ. ಅನುದಾನ
ಮಂಗಳೂರು, ಆ.31: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ಅನುದಾನದಲ್ಲಿ ಜಿಲ್ಲೆಯ ಎಲ್ಲ 36 ಕ್ಷೇತ್ರಗಳಿಗೆ ತಲಾ 4 ಲಕ್ಷ ರೂ. ಹಂಚಿಕೆ ಮಾಡಲು ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಅನುದಾನದ ಹಂಚಿಕೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.
ಕಾಂಗ್ರೆಸ್ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ಪ್ರತಿ ಸದಸ್ಯರ ಕ್ಷೇತ್ರಗಳಿಗೆ ನಾಲ್ಕು ಲಕ್ಷ ರೂ.ಗಳಂತೆ 36 ಕ್ಷೇತ್ರಗಳಿಗೆ ಒಟ್ಟು 1.44 ಕೋಟಿ ರು. ಹಂಚಿಕೆಯಾಗುತ್ತದೆ. ಅಭಿವೃದ್ಧಿ ಅನುದಾನದ 2.65 ಕೋಟಿ ರೂ.ಗಳಲ್ಲಿ ಉಳಿದ ಅನುದಾನವನ್ನು ಜಿ.ಪಂ. ಅಧ್ಯಕ್ಷರು ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಿಕೆ ಮಾಡುವಾಗ ಎಲ್ಲ ಸದಸ್ಯರ ಕ್ಷೇತ್ರಗಳಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.
ತುಕ್ಕು ಹಿಡಿಯುತ್ತಿದೆ ಕೋಟಿ ರೂ. ವೆಚ್ಚದ ನೀರಾ ಘಟಕದ ಯಂತ್ರ
ತುಂಬೆಯಲ್ಲಿ ನೀರಾ ಸಂಸ್ಕರಣ ಘಟಕಕ್ಕೆ 1.50 ಕೋಟಿ ರೂ.ಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಅದು ಕಾರ್ಯಾರಂಭವಾಗದಿರುವ ಕಾರಣ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಇದರಿಂದ ಸರಕಾರದ ಹಣ ಪೋಲಾಗುವಂತಾಗಿದೆ. ಘಟಕ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್ ಪ್ರತಿಕ್ರಿಯಿಸಿ, ನೀರಾ ನೀತಿ ಸಂಪುಟದಲ್ಲಿ ಒಪ್ಪಿಗೆ ಪಡೆದು ವಿಧಾನಮಂಡಲದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಯಾಂತ್ರಿಕ ಪರಿಕರಗಳ ಅಭಿವೃದ್ಧಿಗೆ 60 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಅನುದಾನ ಬಳಕೆಯಲ್ಲಿ ನಿರಾಸಕ್ತಿ
ಕಳೆದ ಸಾಲಿನಲ್ಲಿ ಕೃಷಿ ಮಾರಾಟ ಇಲಾಖೆಯಿಂದ ಪುತ್ತೂರು ಎಪಿಎಂಸಿ ಅಭಿವೃದ್ಧಿಗೆ 10 ಲಕ್ಷ ರು. ಅನುದಾನ ನೀಡಲಾಗಿದ್ದರೂ ಅದನ್ನು ಬಳಕೆ ಮಾಡಿಲ್ಲ ಎಂಬ ಆಕ್ಷೇಪ ಸದಸ್ಯರಿಂದ ಸಭೆಯಲ್ಲಿ ವ್ಯಕ್ತವಾಯಿತು. ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 10 ಲಕ್ಷ ರೂ. ಅನುದಾನವನ್ನು ನೆಲ್ಯಾಡಿ ಹಾಗೂ ಬಂಟ್ವಾಳಕ್ಕೆ ತಲಾ 5 ಲಕ್ಷ ರೂ.ನಂತೆ ಹಂಚಿಕೆ ಮಾಡಲಾಗಿದೆ. ನೆಲ್ಯಾಡಿಯ ಎಪಿಎಂಸಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಹಾಗೂ ಬಂಟ್ವಾಳದ ಎಪಿಎಂಸಿಯೊಂದಕ್ಕೆ ಕಾದಿರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ವೇಳೆ ಬಂಟ್ವಾಳದಲ್ಲಿ ಎಪಿಎಂಸಿ ಎಲ್ಲಿದೆ ಎಂಬ ಬಗ್ಗೆ ಸದಸ್ಯರೊಳಗೆ ಗೊಂದಲ ಆರಂಭವಾಯಿತು.
ಸದಸ್ಯ ಎಂ.ಎಸ್. ಮಹಮ್ಮದ್, ಬಂಟ್ವಾಳದ ಕಕ್ಕೆಪದವಿನಲ್ಲಿ ಎಪಿಎಂಸಿ ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಲು ಸೂಚಿಸಲಾಗಿದೆ ಎಂದರು. ಆದರೆ ಬಂಟ್ವಾಳದಲ್ಲಿ ಎಪಿಎಂಸಿಗೆ ಸೇರಿದ ಜಾಗವೇ ಇಲ್ಲ ಎಂದು ಅಧಿಕಾರಿ ತಿಳಿಸಿದ್ದು, ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ ಕೆಲಹೊತ್ತು ವಾಗ್ವಾದ ನಡೆಯಿತು. ಕಳೆದ ವರ್ಷ ಅನುದಾನ ಬಳಕೆಯಾದ ಕುರಿತಂತೆ ಸಂಬಂಧಿಸಿದ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿರುವುದಾಗಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದರು.
ಏಜೆನ್ಸಿಯಿಂದ ಸಿಬ್ಬಂದಿ ವೇತನದಲ್ಲಿ ತಾರತಮ್ಯ!
ಜಿಲ್ಲಾ ಪಂಚಾಯತ್‌ನ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಏಜೆನ್ಸಿಯವರು ವೇತನದಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಕೈಗಾರಿಕಾ ಇಲಾಖೆಯಲ್ಲಿನ ಡಾಟಾ ಎಂಟ್ರಿ ಸಿಬ್ಬಂದಿಗೆ ಏಜೆನ್ಸಿಯೊಂದು ಮಾಸಿಕ 18,000 ರೂ. ವೇತನ ನೀಡುತ್ತಿದ್ದರೆ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಅದೇ ಹುದ್ದೆಯ ಸಿಬ್ಬಂದಿಗೆ 12,000ರೂ. ವೇತನ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಸದಸ್ಯ ಜನಾರ್ದನ ಗೌಡ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್, ಈಗಾಗಲೇ ಕನಿಷ್ಠ ವೇತನ ಯೋಜನೆ ಜಾರಿಗೊಂಡಿರುವುದರಿಂದ ಸೇವಾ ಅನುಭವ, ಹುದ್ದೆಯ ಆಧಾರದಲ್ಲಿ ಏಕರೂಪದ ವೇತನ ಜಾರಿಗೊಳ್ಳಲಿದೆ ಎಂದು ನುಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್, ಆಶಾ ತಿಮ್ಮಪ್ಪ ಗೌಡ, ಸರ್ವೋತ್ತಮ ಗೌಡ ಉಪಸ್ಥಿತರಿದ್ದರು.
ಕ್ರೀಡೆಗೆ ಪ್ರೋತ್ಸಾಹ: ಕ್ಷೇತ್ರದ ಶಾಲೆಯೊಂದಕ್ಕೆ 10,000 ರೂ. ನಿಗದಿ
ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರದ ತಲಾ ಒಂದೊಂದು ಸರಕಾರಿ ಶಾಲೆಗಳಲ್ಲಿ ಕ್ರೀಡಾ ಸಾಮಗ್ರಿ ಖರೀದಿಗಾಗಿ ತಲಾ 10 ಸಾವಿರ ರೂ.ಗಳಂತೆ 3.5 ಲಕ್ಷ ರು. ಅನುದಾನ ನಿಗದಿಪಡಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲೆಯಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅನುದಾನ ಒದಗಿಸುವ ಮೂಲಕ ಉತ್ತೇಜನ ನೀಡಬೇಕು. ಜಿಲ್ಲೆಯ ಹಲವು ಸರಕಾರಿ ಶಾಲೆಗಳಲ್ಲಿ ಕ್ರೀಡಾ ಪರಿಕರಗಳೇ ಇಲ್ಲ. ಈ ಕುರಿತು ಸಭೆಯಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸದಸ್ಯರೆಲ್ಲ ತೀವ್ರ ಒತ್ತಾಯದ ಅಧ್ಯಕ್ಷೆ ಶಾಂತಿಗೋಡು ಈ ನಿರ್ಣಯ ಪ್ರಕಟಿಸಿದರು. ಅನುದಾನವನ್ನು ನೇರವಾಗಿ ಶಾಲೆಗಳಿಗೆ ನೀಡಲಾಗುವುದು ಎಂದು ಸಿಇಒ ಶ್ರೀವಿದ್ಯಾ ತಿಳಿಸಿದರು.
ಎಲ್ಲ ಸ್ಥಳೀಯ ಸಂಸ್ಥೆಗಳು ಶೇ.2ರಷ್ಟು ಅನುದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಿಸಬೇಕು ಎನ್ನುವ ನಿಯಮವಿದ್ದರೂ ಎಲ್ಲೂ ಪಾಲನೆಯಾಗುತ್ತಿಲ್ಲ. ಎಲ್ಲ ಸ್ಥಳೀಯ ಸಂಸ್ಥೆಗಳು ಅನುದಾನ ಮೀಸಲಿಟ್ಟರೆ ಈ ಸಮಸ್ಯೆಯೇ ಉದ್ಭವವಾಗುವುದಿಲ್ಲ ಎಂದು ಕೊರಗಪ್ಪ ನಾಯ್ಕ ಹೇಳಿದರು. ಇದಕ್ಕೆ ಉತ್ತರಿಸಿದ ಸಿಇಒ, ಈ ಕುರಿತು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಮತ್ತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.