ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಶ್ರೀನಿವಾಸ ಭಟ್- ರಾಘವೇಂದ್ರಗೆ ನ್ಯಾಯಾಂಗ ಬಂಧನ

Update: 2016-08-31 14:44 GMT

ಉಡುಪಿ, ಆ.31: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಾಕ್ಷ ನಾಶಪಡಿಸಿರುವ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರಿಗೆ ಉಡುಪಿ ನ್ಯಾಯಾಲಯವು ಆರು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಆ.29ರಿಂದ ಸಿಐಡಿ ಪೊಲೀಸರ ಕಸ್ಟಡಿಯಲ್ಲಿದ್ದ ಶ್ರೀನಿವಾಸ ಭಟ್ ಮತ್ತು ರಾಘವೇಂದ್ರ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಅಪರಾಹ್ನ ಉಡುಪಿ ಹೆಚ್ಚು ವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

‘ನಿಮಗೆ ವೈದ್ಯಕೀಯ ತಪಾಸಣೆಯ ಅಗತ್ಯವಿದೆಯೇ ಮತ್ತು ಕಸ್ಟಡಿಯಲ್ಲಿ ಪೊಲೀಸರು ಹಿಂಸೆ ನೀಡಿದ್ದಾರೆಯೇ’ ಎಂದು ನ್ಯಾಯಾಧೀಶರು ಈ ವೇಳೆ ಆರೋಪಿಗಳನ್ನು ಪ್ರಶ್ನಿಸಿದರು. ಇವರನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುತ್ತೀರಾ ಎಂದು ನ್ಯಾಯಾಧೀಶರು ತನಿಖಾಧಿಕಾರಿಗಳನ್ನು ಕೇಳಿದರು. ಸದ್ಯಕ್ಕೆ ಅಗತ್ಯ ಇಲ್ಲ, ಮುಂದೆ ಅಗತ್ಯ ಬಿದ್ದರೆ ಕೇಳುತ್ತೇವೆ ಎಂದು ತನಿಖಾಧಿಕಾರಿ ಚಂದ್ರ ಶೇಖರ್ ನ್ಯಾಯಾಧೀಶರಿಗೆ ತಿಳಿಸಿದರು.

ಈಗಾಗಲೇ ಸೆ.6ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದ ಪ್ರಮುಖ ಆರೋಪಿಗಳಾದ ರಾಜೇಶ್ವರಿ, ನವನೀತ್, ನಿರಂಜನ್ ಭಟ್ ಸೇರಿ ದಂತೆ ಎಲ್ಲ ಆರೋಪಿಗಳನ್ನು ಒಟ್ಟಿಗೆ ನ್ಯಾಯಾಲಯಕ್ಕೆ ಕರೆದುಕೊಂಡು ಬರಲು ಅನುಕೂಲವಾಗುವಂತೆ ಇವರಿಗೂ ಸೆ.6ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದರು.

ಈ ಸಂದರ್ಭ ಆರೋಪಿ ಪರ ವಕೀಲರು, ಶ್ರೀನಿವಾಸ ಭಟ್‌ಗೆ ಹೃದಯ ಸಂಬಂಧಿ ಕಾಯಿಲೆ ಇರುವ ಬಗ್ಗೆ ವೈದ್ಯರ ಪ್ರಮಾಣಪತ್ರವನ್ನು ನ್ಯಾಯಾಧೀಶ ರಿಗೆ ಸಲ್ಲಿಸಿದರು. ಮುಂದೆ ಜೈಲಿನಲ್ಲಿ ಇವರಿಗೆ ಎದೆನೋವು ಕಂಡುಬಂದರೆ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ಜೈಲಾಧಿಕಾರಿಗಳಿಗೆ ಸೂಚನೆ ನೀಡ ಬೇಕೆಂದು ಆರೋಪಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದರು. ಬಳಿಕ ಆರೋಪಿಗಳನ್ನು ಹಿರಿಯಡಕ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು.

ಡಿಎನ್‌ಎಗಾಗಿ ರಕ್ತ ಮಾದರಿ ಸಂಗ್ರಹ

ಹೊಳೆಯಲ್ಲಿ ಪತ್ತೆಯಾಗಿರುವ ಮೂಳೆಯ ಡಿಎನ್‌ಎ ಪರೀಕ್ಷೆಗಾಗಿ ಮೃತ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಮತ್ತು ಸಹೋದರ ಸುರೇಶ್ ಶೆಟ್ಟಿ ಅವರ ರಕ್ತದ ಮಾದರಿಯನ್ನು ಆ.31ರಂದು ನ್ಯಾಯಾಲಯದಲ್ಲಿ ಸಂಗ್ರಹಿಸಲಾಯಿತು.

ಪೊಲೀಸರ ಮನವಿಯಂತೆ ಭಾಸ್ಕರ್ ಶೆಟ್ಟಿಯ ತಾಯಿ ಮತ್ತು ಸಹೋದರರ ರಕ್ತದ ಮಾದರಿಯನ್ನು ಪಡೆದುಕೊಳ್ಳಲು ನ್ಯಾಯಾಲಯವು ಆ.24ರಂದು ಒಪ್ಪಿಗೆ ನೀಡಿ, ಆ.31ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ನೋಟೀಸ್ ಜಾರಿ ಮಾಡಿತ್ತು. ಅದರಂತೆ ಇಂದು ನ್ಯಾಯಾಲಯಕ್ಕೆ ಆಗಮಿಸಿದ ತಾಯಿ ಮತ್ತು ಸಹೋದರರ ರಕ್ತದ ಮಾದರಿಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರು ಪಡೆದುಕೊಂಡರು.

ಈ ರಕ್ತದ ಮಾದರಿಯನ್ನು ಸಿಓಡಿ ಪೊಲೀಸರು ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಇದರಿಂದ ಹೊಳೆಯಲ್ಲಿ ಪತ್ತೆಯಾಗಿರುವ ಮೂಳೆ ಭಾಸ್ಕರ್ ಶೆಟ್ಟಿ ಅವರದ್ದೆ ಎಂಬುದು ಸಾಬೀತಾಗಲಿದೆ. ಇದು ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News