ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಸರಕಾರದಿಂದ ನಿರ್ಲಕ್ಷ್ಯ ಧೋರಣೆ: ಎಸ್‌ಡಿಪಿಐ ಆರೋಪ

Update: 2016-08-31 15:31 GMT

ಬೆಂಗಳೂರು, ಆ.31: ಹಿರಿಯ ಸಾಹಿತಿ, ಸಂಶೋಧಕ, ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ಒಂದು ವರ್ಷ ಕಳೆದರೂ ಆರೋಪಿಗಳನ್ನು ಬಂಧಿಸದೇ ಇರುವುದು ಖೇದಕರ ಸಂಗತಿ. ಈ ಪ್ರಕರಣದಲ್ಲಿ ಸರಕಾರ ನಿರ್ಲಕ್ಷ ಧೋರಣೆಯನ್ನು ವಹಿಸಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

ಎಂ.ಎಂ.ಕಲಬುರ್ಗಿ ನಾಡು ಕಂಡ ಶ್ರೇಷ್ಟ ಚಿಂತಕ. ಇಂತಹ ಶ್ರೇಷ್ಠ ವ್ಯಕ್ತಿಗಳ ಹತ್ಯೆಯಾಗಿ ಒಂದು ವರ್ಷವಾದರೂ ಆರೋಪಿಗಳ ಬಂಧನವಾಗಿಲ್ಲ ಎಂದಾದರೆ ಸಾಮಾನ್ಯ ಜನರ ಅವಸ್ಥೆ ಏನು?, ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕು ಮತ್ತು ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಪೊಲೀಸ್ ಇಲಾಖೆ ಎಂತೆಂತಹ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕಲಬುರ್ಗಿ ಹತ್ಯೆ ಪ್ರಕರಣವನ್ನು ಬೇಧಿಸಿ ಹಂತಕರನ್ನು ಬಂಧಿಸದಿರುವುದು ಹಲವಾರು ಸಂಶಯಗಳನ್ನು ಹುಟ್ಟು ಹಾಕುತ್ತಿವೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಕಲಬುರ್ಗಿಯವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಮತ್ತು ಹಂತಕರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ, ಮಾಜಿ ಸಚಿವೆ ಬಿ.ಟಿ. ಲಲಿತಾ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ಅವರನ್ನು ಹತ್ಯೆ ಮಾಡುವುದಾಗಿ ಹೇಳಲಾಗಿದೆ. ಇದು ಅತ್ಯಂತ ಆತಂಕದ ಬೆಳವಣಿಗೆಯಾಗಿದ್ದು, ಈ ಪ್ರಕರಣವನ್ನು ಎಸ್‌ಡಿಪಿಐ ಖಂಡಿಸುತ್ತದೆ ಹಾಗೂ ಬೆದರಿಕೆ ಪತ್ರದ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮುಂದೆ ತರಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಗೋರಕ್ಷಕರ ಮತ್ತು ಸಂಘಪರಿವಾರದ ಹಾವಳಿ ಹೆಚ್ಚಾಗಿದ್ದು ಅವರ ನಿಯಂತ್ರಣಕ್ಕೆ ಸರಕಾರ ಕ್ರಮವನ್ನು ಕೈಗೊಳ್ಳಬೇಕು. ಇಂದು ಸಂಘ ಪರಿವಾರ ಮತ್ತು ಫ್ಯಾಸಿಸ್ಟ್ ಧೋರಣೆಯನ್ನು ಯಾರು ವಿರೋಧಿಸುತ್ತಾರೋ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಷಡ್ಯಂತ್ರ ವ್ಯಾಪಕವಾಗಿ ನಡೆಯುತ್ತಿದೆ ಹಾಗೂ ಅವರ ನಿಲುವಳಿಯನ್ನು ವಿರೋಧಿಸವವರಿಗೆ ಬೆದರಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದ್ದರೂ ಕಾಂಗ್ರೆಸ್ ಆಡಳಿತ ಪಕ್ಷದಲ್ಲಿದ್ದು, ಕೋಮುವಾದಿಗಳ ವಿರುದ್ಧ , ಸಂಘಪರಿವಾರದ ವಿರುದ್ಧ ಕ್ರಮವನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಈ ಬಗ್ಗೆ ಸರಕಾರ ಹೆಚ್ಚಿನ ಗಮನ ಹರಿಸಬೇಕು ಮತ್ತು ಸಮಾಜದ ಶಾಂತಿಕದಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News