ನಾಯಕನ ಸಭೆಯಲ್ಲಿ ನಿದ್ದೆ ಮಾಡಿದ ಉಪ ಪ್ರಧಾನಿಗೆ ಗಲ್ಲು!

Update: 2016-08-31 15:56 GMT

ಸಿಯೋಲ್ (ದಕ್ಷಿಣ ಕೊರಿಯ), ಆ. 31: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಅಧ್ಯಕ್ಷತೆ ವಹಿಸಿದ ಸಭೆಯೊಂದರಲ್ಲಿ ‘ಅಗೌರವ’ ತೋರಿಸಿದರೆಂಬ ಆರೋಪದಲ್ಲಿ ದೇಶದ ಉಪ ಪ್ರಧಾನಿಯೊಬ್ಬರನ್ನು ನೇಣಿಗೇರಿಸಲಾಗಿದೆ ಹಾಗೂ ಇತರ ಇಬ್ಬರು ಅಧಿಕಾರಿಗಳನ್ನು ಮತ್ತೆ ಶಿಕ್ಷಣ ಪಡೆದುಕೊಂಡು ಬರುವುದಕ್ಕಾಗಿ ಕಳುಹಿಸಲಾಗಿದೆ ಎಂದು ದಕ್ಷಿಣ ಕೊರಿಯ ಬುಧವಾರ ತಿಳಿಸಿದೆ.

2011ರಲ್ಲಿ ತಂದೆಯ ಮರಣದ ನಂತರ ಅಧಿಕಾರಕ್ಕೆ ಬಂದಂದಿನಿಂದ ಕಿಮ್ ಹಲವಾರು ಹಿರಿಯ ಅಧಿಕಾರಿಗಳನ್ನು ನೇಣಿಗೇರಿಸಿದ್ದಾರೆ ಹಾಗೂ ಪದಚ್ಯುತಿಗೊಳಿಸಿದ್ದಾರೆ. ಇದು ಆಡಳಿತದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಲು ಅವರು ನಡೆಸುತ್ತಿರುವ ಪ್ರಯತ್ನ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.‘‘ಶಿಕ್ಷಣ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಉಪ ಪ್ರಧಾನಿ ಕಿಮ್ ಯಾಂಗ್-ಜಿನ್‌ರನ್ನು ಗಲ್ಲಿಗೇರಿಸಲಾಗಿದೆ’’ ಎಂದು ಸಿಯೋಲ್‌ನ ಏಕೀಕರಣ ಸಚಿವಾಲಯದ ವಕ್ತಾರರೋರ್ವರು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

‘‘ಪಕ್ಷ ವಿರೋಧಿ ಹಾಗೂ ಕ್ರಾಂತಿಕಾರಿ ವಿರೋಧಿ ಚಳವಳಿಗಾರ’’ ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ಜುಲೈನಲ್ಲಿ ಕೊಲ್ಲಲಾಗಿದೆ ಎಂದರು.‘‘ಉತ್ತರ ಕೊರಿಯದ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದಾಗ ಕೆಟ್ಟ ಶೈಲಿಯಲ್ಲಿ ಕುಳಿತುಕೊಂಡ ಆರೋಪವನ್ನು ಕಿಮ್ ಯಾಂಗ್ ಜಿನ್ ಎದುರಿಸುತ್ತಿದ್ದರು.

ಬಳಿಕ ಅವರನ್ನು ವಿಚಾರಣೆಗೊಳಪಡಿಸಿದಾಗ ಅವರ ಇನ್ನಷ್ಟು ಅಪರಾಧಗಳು ಹೊರಬಂದವು’’ ಎಂದರು.‘‘ಕಿಮ್ ಜಾಂಗ್ ಅಧ್ಯಕ್ಷತೆಯ ಸಭೆಯಲ್ಲಿ ನಿದ್ದೆ ಮಾಡಿದುದಕ್ಕಾಗಿ ಉಪ ಪ್ರಧಾನಿ ತನ್ನ ನಾಯಕನ ಅವಕೃಪೆಗೆ ಗುರಿಯಾಗಿದ್ದರು. ಅವರನ್ನು ಸ್ಥಳದಲ್ಲೇ ಬಂಧಿಸಲಾಯಿತು ಹಾಗೂ ಸರಕಾರಿ ಭದ್ರತಾ ಸಚಿವಾಲಯ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು’’ ಎಂಬುದಾಗಿ ಮಂಗಳವಾರ ‘ಜೂಂಗ್‌ಆಂಗ್ ಇಲ್ಬೊ’ ಪತ್ರಿಕೆ ಮಂಗಳವಾರ ಮೊದಲ ಬಾರಿಗೆ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News