ಕಂದಾಯ ಅಧಿಕಾರಿಗಳಿಂದ ರಬ್ಬರ್ ಗಿಡ ನಾಶ ಆರೋಪ
ಬೆಳ್ತಂಗಡಿ, ಆ.31: ಕನ್ಯಾಡಿ ಗ್ರಾಮದ ಕೈಲಾಜೆ ಎಂಬಲ್ಲಿ ಸಾರ್ವಜನಿಕ ರಸ್ತೆಗಾಗಿ ಕೃಷಿಕರೊಬ್ಬರ ಸುಮಾರು 50 ರಬ್ಬರ್ ಗಿಡಗಳನ್ನು ಕಡಿದುಹಾಕಿದ ಕಂದಾಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಸಿಪಿಎಂ ತಾಲೂಕು ಸಮಿತಿ ಬೆಂಬಲದೊಂದಿಗೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ನಡ ಗ್ರಾಪಂ ವ್ಯಾಪ್ತಿಯ ಕೈಲಾಜೆ ಎಂಬಲ್ಲಿಂದ ಇಂದಬೆಟ್ಟು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಸ್ಥಳೀಯ ನಿವಾಸಿ ಕುಂಞಣ್ಣ ಗೌಡ ಎಂಬವರು ನೆಟ್ಟಿದ್ದ ರಬ್ಬರ್ ಗಿಡಗಳನ್ನು ಬೆಳ್ತಂಗಡಿ ಕಂದಾಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಮ ಕ್ಷಮದಲ್ಲೇ ಕಡಿದು ಹಾಕಿದ್ದರು. ಈ ಬಗ್ಗೆ ಕುಂಞಣ್ಣ ಗೌಡ ಕಂದಾಯ ಅಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡಿದರು. ಆದರೆ ಬಡ ರೈತರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡದಿರುವ ಕಂದಾಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಶ್ಯಾಮರಾಜ್ ಪಟ್ರಮೆ, ಸಿಪಿಎಂ ಕಾರ್ಯದರ್ಶಿ ಬಿ.ಎಂ.ಭಟ್, ಮುಖಂಡರುಗಳಾದ ನೆಬಿಸಾ, ಜಯರಾಮ ಮಯ್ಯ, ಲೋಕೇಶ, ನಾರಾಯಣ, ಈಶ್ವರಿ, ಡೇನಿಸ್ ವೇಗಸ್, ಕಿರಣ ಪ್ರಭಾ, ಸಂಜೀವ ನಾಯ್ಕಾ, ವಿಠಲ ಮಲೆಕುಡಿಯ, ಲಾರೆನ್ಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.