×
Ad

ಗೆಲುವು, ಕಣ್ಣೀರಿನೊಂದಿಗೆ ಫುಟ್ಬಾಲ್‌ಗೆ ವಿದಾಯ ಹೇಳಿದ ಜರ್ಮನಿ ಆಟಗಾರ ಬಾಸ್ಟಿಯನ್ ಶ್ವೆನ್‌ಸ್ಟಿಗರ್

Update: 2016-09-01 12:12 IST

 ಬರ್ಲಿನ್, ಸೆ.1: ಜರ್ಮನಿ ತಂಡದ ನಾಯಕ ಬಾಸ್ಟಿಯನ್ ಶ್ವೆನ್‌ಸ್ಟಿಗರ್ ಬುಧವಾರ ತವರು ನೆಲದಲ್ಲಿ ಫಿನ್‌ಲ್ಯಾಂಡ್‌ನ ವಿರುದ್ಧ ಸೌಹಾರ್ದ ಪಂದ್ಯ ಆಡುವುದರೊಂದಿಗೆ ಫುಟ್ಬಾಲ್‌ಗೆ ವಿದಾಯ ಹೇಳಿದರು.

ಮ್ಯಾಕ್ಸ್ ಮಯೆರ್ ಹಾಗೂ ಮೆಸೂಟ್ ಒಝಿಲ್ ತಲಾ ಗೋಲು ಬಾರಿಸುವ ಮೂಲಕ ಜರ್ಮನಿಗೆ 2-0 ಗೋಲುಗಳ ಅಂತರದಿಂದ ಗೆಲುವು ತಂದುಕೊಟ್ಟರು. ವಿದಾಯದ ಪಂದ್ಯ ಆಡಿದ ಬಾಸ್ಟಿಯನ್‌ಗೆ ಗೆಲುವಿನ ಉಡುಗೊರೆ ನೀಡಿದರು. ರವಿವಾರ ನಾರ್ವೆಯಲ್ಲಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಆಡಲಿರುವ ಜರ್ಮನಿಗೆ ಈ ಗೆಲುವು ಹೊಸ ಹುಮ್ಮಸ್ಸು ತಂದಿದೆ.

121 ಹಾಗೂ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಬಾಸ್ಟಿಯನ್ ಮೊದಲ 66 ನಿಮಿಷಗಳ ಕಾಲ ಆಡಿದರು. ಬಾಸ್ಟಿಯನ್ ಮೈದಾನದಿಂದ ನಿರ್ಗಮಿಸುವ ವೇಳೆ ಕೋಚ್‌ರನ್ನು ಆಲಿಂಗಿಸಿದರು. ಬಳಿಕ ಬೆಂಚ್‌ನಲ್ಲಿದ್ದ ಮ್ಯಾನುಯೆಲ್ ನೆಯೆರ್ ಸಹಿತ ಪ್ರತಿಯೊಬ್ಬರನ್ನು ಆಲಿಂಗಿಸಿದರು.

 ಮೈದಾನದೊಳಗೆ ನುಸುಳಿದ ಅಭಿಮಾನಿಯೊಬ್ಬ ವಿಶ್ವಕಪ್ ವಿಜೇತ ಆಟಗಾರ ಬಾಸ್ಟಿಯನ್‌ರೊಂದಿಗೆ ಸೆಲ್ಫಿ ತೆಗೆದುಕೊಂಡರು. ಆಗ ಸ್ವಲ್ಪ ಸಮಯ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು.

 ‘‘ನಾನು ಜರ್ಮನಿ ತಂಡದಲ್ಲಿ ಆಡುವಾಗ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ. ಜರ್ಮನಿ ತಂಡದಲ್ಲಿ ಆಡಿರುವುದು ಒಂದು ಗೌರವ. ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಲು ಬಯಸುವೆ. ಗೆಲುವಿನೊಂದಿಗೆ ಫುಟ್ಬಾಲ್‌ಗೆ ವಿದಾಯ ಹೇಳಿದ್ದಕ್ಕೆ ಸಂತೋಷವಾಗುತ್ತಿದೆ. ನನಗೆ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ’’ ಎಂದು ಉಕ್ಕಿ ಬಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಬಾಸ್ಟಿಯನ್ ತಿಳಿಸಿದ್ದಾರೆ.

12 ವರ್ಷಗಳ ಹಿಂದೆ 2004ರಲ್ಲಿ ಫುಟ್ಬಾಲ್‌ಗೆ ಪಾದಾರ್ಪಣೆಗೈದಿರುವ 32ರ ಪ್ರಾಯದ ಬಾಸ್ಟಿಯನ್ ಈ ವರ್ಷದ ಆಗಸ್ಟ್‌ನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಒಟ್ಟು 24 ಗೋಲುಗಳನ್ನು ಬಾರಿಸಿದ್ದ ಅವರು 2014ರ ವಿಶ್ವಕಪ್ ವಿಜೇತ ಜರ್ಮನಿ ತಂಡದ ಪ್ರಮುಖ ಆಟಗಾರನಾಗಿದ್ದರು. ಜರ್ಮನಿಯ ಪರ ಗರಿಷ್ಠ ಪಂದ್ಯಗಳನ್ನು ಆಡಿರುವ ನಾಲ್ಕನೆ ಆಟಗಾರನಾಗಿದ್ದಾರೆ. ಜರ್ಮನಿ ಕೋಚ್ ಜೋಕಿಮ್ ಲಾ ಕೊನೆಯ ಬಾರಿ ತಂಡವನ್ನು ಮುನ್ನಡೆಸುವ ಅವಕಾಶವನ್ನು ಬಾಸ್ಟಿಯನ್‌ಗೆ ನೀಡಿದ್ದರು.

30,121ರಷ್ಟಿದ್ದ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಜಮಾಯಿಸಿದ್ದು, ತಮ್ಮ ಮೆಚ್ಚಿನ ಆಟಗಾರನಿಗೆ ವಿದಾಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News