ಪಿ.ಎ.ಕಾಲೇಜಿನಲ್ಲಿ ‘ಯುರೇಕಾ’ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆ
ಕೊಣಾಜೆ, ಸೆ.1: ದೇಶದ ಅಭಿವೃಧ್ಧಿಯಲ್ಲಿ ಸಂಶೋಧನೆಯ ಪಾತ್ರ ಮಹತ್ವಪೂರ್ಣವಾದುದು. ಯಾವುದೇ ಸಂಶೋಧನೆಯು ಪೂರ್ಣಗೊಂಡು ಯಶಸ್ವಿಯಾಗಬೇಕಾದರೆ ಸಂಶೋಧನಾ ವಿಷಯದಲ್ಲಿ ಆಳವಾಗಿ ತೊಡಗಿಸಿಕೊಳ್ಳುವುದು ಅಗತ್ಯ. ನಮ್ಮ ಅರಿವಿನ ವಿಸ್ತಾರ ಹಾಗೂ ಪರಿಶ್ರಮದಿಂದ ಸಂಶೋಧನೆಯ ಯಶಸ್ಸನ್ನು ಕಾಣಲು ಸಾಧ್ಯ ಎಂದು ಮಲೇಷ್ಯಾದ ಐಐಯುಎಂನ ಪ್ರೊಫೆಸರ್ ಡಾ.ಎಸ್.ಎ.ಖಾನ್ ಅಭಿಪ್ರಾಯಪಟ್ಟರು.
ಅವರು ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಂಶೋಧನೆ, ಸಂಶೋಧನಾ ಬರವಣಿಗೆ ಹಾಗೂ ಪ್ರಕಾಶನ’ ಎಂಬ ವಿಷಯದಲ್ಲಿ 3 ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಗುರುವಾರ ಪಿ.ಎ.ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಸಂಶೋಧನಾ ಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದ್ದು ಈ ನಿಟ್ಟಿನಲ್ಲಿ ಸಂಶೋಧನೆಯ ಮಹತ್ವವನ್ನು ನಾವು ಅರಿತುಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ. ಇಂತಹ ಕಾರ್ಯಾಗಾರಗಳು ಇದಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆಎಸ್‌ಎ ದಮ್ಮಾಮ್ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಅಬ್ದುಲ್ ಮುಜೀಬ್, ಇಂದು ಅದೆಷ್ಟೋ ಸರಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಕೇವಲ ವಿಶ್ವವಿದ್ಯಾನಿಲಯಗಳು ಹುಟ್ಟಿಕೊಂಡರೆ ಮಾತ್ರ ಸಾಲದು. ಮೌಲ್ಯಯುತ ವಿದ್ಯಾರ್ಥಿಗಳೂ ಸೃಷ್ಟಿಯಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಇಂದು ಅಮೂಲಾಗ್ರ ಬದಲಾವಣೆಗಳು ಕಾಣುತ್ತಿದ್ದು ಸಂಶೋಧನಾ ಕ್ಷೇತ್ರಕ್ಕೂ ಒತ್ತು ನೀಡಲಾಗುತ್ತಿದೆ. ಸಮಾಜದಲ್ಲಿ ಎದುರಾಗುವ ಅದೆಷ್ಟೋ ಸವಾಲುಗಳಿಗೆ ಸಂಶೋಧನೆಯ ಮೂಲಕ ಪರಿಹಾರವನ್ನು ಕಾಣಲು ಸಾಧ್ಯ. ಅಲ್ಲದೆ, ಸಂಶೋಧನೆ ಕೇವಲ ಅಧ್ಯಾಪನ ಅಥವಾ ಭಡ್ತಿಗೆ ಮಾತ್ರವಲ್ಲ ದೇಶದ ಅಭಿವೃದ್ಧಿಗೂ ಪ್ರೇರಕ ಶಕ್ತಿಯಾಗಬೇಕು ಎಂದು ಹೇಳಿದರು.
ಪಿ.ಎ.ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಈ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸಂಶೋಧನೆಯು ಅಭಿವೃದ್ದಿಯ ಮಾಪನವಾಗಿದೆ. ಯಾವುದೇ ಸಂಶೋಧನೆಯು ಯಶಸ್ವಿಯಾಗಬೇಕಾದರೆ ಅಪಾರವಾದ ಜ್ಞಾನಸಂಗ್ರಹದ ಜೊತೆಗೆ ಸಂಶೋಧನೆಯ ವಿಧಾನಗಳನ್ನು ಸಮರ್ಪಕವಾಗಿ ಅರಿತಿರಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರವು ಉಪಯುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಸ್‌ಎ ದಮ್ಮಾಮ್ ವಿವಿಯ ಸಹ ಪ್ರಾಧ್ಯಾಪಕ ಡಾ.ರಿತೇಶ್ ಜಾರ್ಜ್ ಮಿನೇಜಸ್, ಪಿ.ಎ.ಕಾಲೇಜಿನ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಎ.ಜೆ.ಆಂಥನಿ, ಸಂಶೋಧನಾ ಡೀನ್ ಝಹೀದ್ ಅನ್ಸಾರಿ, ಪಿ.ಎ.ಕಾಲೇಜು ಆಡಳಿತ ನಿರ್ದೇಶಕ ಡಾ.ಸರ್ಫ್ರಾಝ್ ಹಾಸಿಂ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಾಗಾರದ ಸಂಘಟಕ, ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ.ಸಿರಾಜುದ್ದೀನ್ ವಂದಿಸಿದರು. ಫಾತಿಮತ್ ರೆಹನಾ ಹಾಗೂ ನಬಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.