ಸುಳ್ಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಸುಳ್ಯ, ಸೆ.1: ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಹಾಗೂ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಶಾಸಕ ಎಸ್.ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಸಂಖ್ಯೆ ದೇಶದ ಸಂಪತ್ತು. ಹೆಚ್ಚುತ್ತಿರುವ ಜನಸಂಖ್ಯೆ ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಜನಸಂಖ್ಯೆ ಹೆಚ್ಚೂ ಆಗಬಾರದು ಕಡಿಮೆಯೂ ಆಗಬಾರದು. ಸಮತೋಲನದಲ್ಲಿರಬೇಕು. ಇದಕ್ಕೆ ಕಾನೂನು ತರುವ ಅಗತ್ಯವಿದೆ. ಅದರ ಜೊತೆಗೆ ಜನರಿಗೂ ನಂಬಿಕೆ ಇರಬೇಕು ಎಂದವರು ಹೇಳಿದರು.
ಜನಸಂಖ್ಯೆ ನಿಯಂತ್ರಣದ ಕುರಿತು ಜಿಲ್ಲಾ ಮಲೇರಿಯ ಪರಿವೀಕ್ಷಕ ಜಯರಾಮ ಪೂಜಾರಿ ಉಪನ್ಯಾಸ ನೀಡಿದರು. ಪ್ರಪಂಚದಲ್ಲಿ ಶೇ.2.4 ಭೂಭಾಗವನ್ನು ಹೊಂದಿರುವ ಭಾರತ ಶೇ.16ರಷ್ಟು ಜನಸಂಖ್ಯೆ ಹೊಂದಿದೆ. ಅಮೆರಿಕಾದ ಮೂರನೆ ಎರಡರಷ್ಟು ಭೂಪ್ರದೇಶವಿದ್ದರೂ ಜನಸಂಖ್ಯೆಯಲ್ಲಿ ಅದರ ಮೂರು ಪಟ್ಟು ಹೆಚ್ಚಿದೆ. ಇಂದು ಜನಸಂಖ್ಯೆ ನಿಯಂತ್ರಣದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಮಹಿಳೆಯರು 18 ವರ್ಷದಲ್ಲಿ ಮದುವೆಯಾದರೂ ಸಂತಾನ ಪಡೆಯುವುದಕ್ಕೂ ಯೋಜನೆ, ಯೋಚನೆ ಹಾಕಬೇಕು ಎಂದವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ, ಮದುವೆ ವಯಸ್ಸನ್ನು ಇನ್ನೂ ಎರಡು ವರ್ಷ ಹೆಚ್ಚಿಸಬೇಕು ಎಂದು ಹೇಳಿದರು.
ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರಾದ ಪಿ.ಹೇಮಲತಾ, ಕೆ.ನಾಗೇಂದ್ರ ಗೌಡ, ಹಾಗೂ ಆಶಾ ಕಾರ್ಯಕರ್ತೆ ಗುತ್ತಿಗಾರಿನ ಕೆ.ಎಸ್.ಗಿರಿಜಾ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಸದಸ್ಯರಾದ ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸದಸ್ಯ ಅಶೋಕ್ ನೆಕ್ರಾಜೆ, ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ಡಾ.ಅರುಣ್ ಕುಮಾರ್, ಬಿಇಒ ಬಿ.ಎಸ್.ಕೆಂಪಲಿಂಗಪ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಪದ್ಮನಾಭ ವೇದಿಕೆಯಲ್ಲಿದ್ದರು.
ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಸ್ವಾಗತಿಸಿದರು. ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.