ಪುತ್ತೂರು: ಗ್ರಾ.ಪಂ. ಸದಸ್ಯತ್ವ ಅನರ್ಹಗೊಳಿಸಲು ಸಹಾಯಕ ಆಯುಕ್ತರಿಗೆ ಮನವಿ

Update: 2016-09-01 13:27 GMT

ಪುತ್ತೂರು, ಸೆ.1: ಆರ್ಯಾಪು ಗ್ರಾ.ಪಂ. ಸದಸ್ಯ ರಮೇಶ್ ರೈ ಡಿಂಬ್ರಿ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಅವರ ಸದಸ್ಯತನವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ.ಗೊಳಪಟ್ಟ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

2016ರ ಜುಲೈ 12ರಂದು ನಡೆದ ಕುರಿಯ 2ನೆ ವಾರ್ಡ್ ಸಭೆಯಲ್ಲಿ ರಮೇಶ್ ರೈ ಡಿಂಬ್ರಿ, ಕುರಿಯ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ 5 ಸೆಂಟ್ಸ್ ಜಾಗ ಅಳತೆ ಆಗಿ ಕಡತ ತಯಾರಿಸಿರುವುದಾಗಿ ಮತ್ತು ಕುರಿಯ ಗ್ರಾಮದ ಅಜಲಾಡಿ ಕೆರೆಯನ್ನು ಅಭಿವೃದ್ದಿಗೊಳಿಸಿ ಈಜುಕೊಳ ನಿರ್ಮಿಸುವುದಾಗಿ ಗ್ರಾಮ ಪಂಚಾಯತ್ ನಿರ್ಣಯಿಸಿ ಎ.ಸಿಯವರಿಗೆ ಸಲ್ಲಿಸಲಾಗಿದೆ ಎಂದು ಜನರಿಗೆ ತಪ್ಪುಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಂದಿನ ವಾರ್ಡ್ ಸಭೆಯಲ್ಲಿ ಮತ್ತು ಬಳಿಕ ಜುಲೈ 10ರಂದು ನಡೆದ ಆರ್ಯಾಪು ಗ್ರಾಮ ಸಭೆಯಲ್ಲಿ ಅದನ್ನು ಗ್ರಾಮಸ್ಥ ಕೂಸಪ್ಪ ಎಂಬವರು ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು.ಬಳಿಕ ರಮೇಶ್ ರೈ ತನ್ನನ್ನು ತಾನು ಸಮರ್ಥಿಸಿಕೊಂಡು ಪತ್ರಿಕೆಯಲ್ಲಿ ಸುಳ್ಳು ಸ್ಪಷ್ಟನೆ ನೀಡಿದ್ದಾರೆ. ಬಳಿಕ ಆ.03ರಂದು ನಡೆದ ಆರ್ಯಾಪು ಗ್ರಾ.ಪಂನ ಸಾಮಾನ್ಯ ಸಭೆಯಲ್ಲೂ ರಮೇಶ್ ರೈ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ. ಹಾಗಾಗಿ ಅವರ ವಿರುದ್ದ ’ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 23-ಎ ಪ್ರಕಾರ ದುರ್ನಡತೆ ಅಥವಾ ಅಪಕೀರ್ತನಕರ ನಡತೆಗೆ ಸಂಬಂಧಿಸಿ ಅವರನ್ನು ಸದಸ್ಯತನದಿಂದ ತೆಗೆದು ಹಾಕಲು ಕ್ರಮ ಜರಗಿಸಬೇಕೆಂದು’ ಮನವಿ ಮಾಡಲಾಗಿದೆ.

ಮಾಜಿ ಗ್ರಾ.ಪಂ ಸದಸ್ಯ ಯಾಕೂಬ್ ಓಟೆತ್ತಿಮಾರು, ಕೂಸಪ್ಪ ಎಂ., ಬಶೀರ್ ಸಂಪ್ಯ, ಫೈಝಲ್ ಕೆ. ಕುರಿಯ, ಸಂಕಪ್ಪಎಂ. ಓಟೆತ್ತಿಮಾರು, ಶೀನ ಬಳ್ಳಮಜಲು, ಅಬ್ದುಲ್ ಕುಂಞಿ ಕುರಿಯ, ನಾಗೇಶ ಎಂ. ಓಟೆತ್ತಿಮಾರು ಕುರಿಯ, ಸವಾದ್ ಅಜಲಾಡಿ, ಸುಂದರ ಓಟೆತ್ತಿಮಾರು, ಸಿರಾಜ್ ಬಳ್ಳಮಜಲು, ಅಬ್ದುಲ್ ಅಝೀಝ್ ಸಂಪ್ಯ, ಮುಹಮ್ಮದ್ ರಿಯಾಝ್ ಆರ್ಯಾಪು ಮೊದಲಾದವರು ಸಹಿ ಮಾಡಲಾಗಿದ್ದ ಮನವಿ ಅರ್ಜಿಯನ್ನು ಗ್ರಾಮಸ್ಥ, ದಲಿತ ಮುಖಂಡ ಎಂ.ಕೂಸಪ್ಪಅವರ ನೇತೃತ್ವದ ನಿಯೋಗ ಸಹಾಯಕ ಆಯುಕ್ತರಿಗೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News