ಆಪ್ ಸಿದ್ಧಾಂತ ತ್ಯಜಿಸುವ ಬದಲು ಸಾಯಲೂ ಸಿದ್ಧ: ಕೇಜ್ರಿ ಗುಡುಗು
ಹೊಸದಿಲ್ಲಿ, ಸೆ.1: ಉಚ್ಚಾಟಿತ ಸಚಿವ ಸಂದೀಪ್ ಕುಮಾರ್, ಎಎಪಿ ಪಕ್ಷವು ಎಂದೂ ರಾಜಿಮಾಡಿಕೊಳ್ಳದಂತಹ ಪ್ರಧಾನ ವೌಲ್ಯಗಳಿಗೆ ದ್ರೋಹಬಗೆದಿದ್ದಾರೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಆಳ್ವಿಕೆಯಿರುವ ರಾಜ್ಯಗಳಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ನಿರ್ಲಕ್ಷವನ್ನು ಪ್ರದರ್ಶಿಸುತ್ತಿವೆಯೆಂದು ಅವರು ಟೀಕಿಸಿದ್ದಾರೆ.
ಎಎಪಿಯ ಸಿದ್ಧಾಂತಗಳಿಂದ ದೂರಸಾಗುವ ಬದಲು ತಾನು ಸಾಯಲೂ ಸಿದ್ಧನಿರುವುದಾಗಿ ಕೇಜ್ರಿವಾಲ್ ಇಂದು ಪ್ರಸಾರ ಮಾಡಿರುವ ವೀಡಿಯೊ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.
‘‘ಸಂದೀಪ್ ಕುಮಾರ್ ಪಕ್ಷಕ್ಕೆ ದ್ರೋಹವೆಸಗಿದ್ದಾರೆ. ಅವರು ಆಪ್ ಚಳವಳಿಗೆ ದ್ರೋಹ ಹಾಗೂ ಎಎಪಿಯ ಮೇಲೆ ದೇಶಾದ್ಯಂತದ ಜನರು ಇರಿಸಿರುವ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ನಮ್ಮ ಮುಖ್ಯ ವೌಲ್ಯಗಳ ಜೊತೆ ನಾವೆಂದೂ ರಾಜಿ ಮಾಡಿಕೊಳ್ಳಲಾರೆವು. ತಪ್ಪುಗಳನ್ನು ಸಹಿಸುವ ಬದಲು ನಾವು ಸಾಯಲೂ ಸಿದ್ಧರಿದ್ದೇವೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಮತ್ತು ಸಮಾಜಕಲ್ಯಾಣ ಸಚಿವರಾದ ಸಂದೀಪ್ ಕುಮಾರ್ ಅವರು ಮಹಿಳೆ ಯೊಬ್ಬಳೊಂದಿಗೆ ಅಶ್ಲೀಲ ಭಂಗಿಯಲ್ಲಿರುವ ದೃಶ್ಯಗಳುಳ್ಳ 9 ನಿಮಿಷಗಳ ವೀಡಿಯೊವೊಂದು ಕೈಸೇರಿದ ಕೆಲವೇ ತಾಸುಗಳ ಬಳಿಕ ಅವರನ್ನು ಸಂಪುಟದಿಂದ ಉಚ್ಚಾಟಿಸಲಾಗಿತ್ತು.
ತನ್ನ ಸರಕಾರದ ಬಗ್ಗೆ ಬಿಜೆಪಿಯ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಮಾಜಿ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಹೊರಿಸಲ್ಪಟ್ಟಾಗ ಅವರ ವಿರುದ್ಧ ಕೇಂದ್ರ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿತ್ತೆಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ಕಟುಟೀಕೆ ಮಾಡಿರುವ ಅವರು, ಆ ಪಕ್ಷದ ಪಂಜಾಬ್ ವರಿಷ್ಠ ಅಮರೀಂದರ್ ಸಿಂಗ್ ಕುಟುಂಬವು ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿದೆಯೆಂದು ಪತ್ತೆಯಾದಾಗ, ಅವರ ವಿರುದ್ಧ ಯಾವ ಕ್ರಮವನ್ನು ಕೈಗೊಂಡಿದೆಯೆಂದು ಕಟಕಿಯಾಡಿದರು.